ಆರೆಸ್ಸೆಸ್ ನಿಷೇಧಿಸಲು ಕಾಂಗ್ರೆಸ್ ನಿಂದ ಸಾಧ್ಯವಿಲ್ಲ: ವಿಜಯೇಂದ್ರ

Krishnaveni K

ಬುಧವಾರ, 15 ಅಕ್ಟೋಬರ್ 2025 (13:39 IST)
ಚಿತ್ರದುರ್ಗ: ಆರೆಸ್ಸೆಸ್ ಮೇಲೆ ನಿಷೇಧ ಹೇರುವುದು ಅಸಾಧ್ಯವಾದ ಮಾತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.
 
ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಶಾಸಕರು, ಹಿರಿಯ ಸಚಿವರು ಆರೆಸ್ಸೆಸ್ ಕುರಿತು ಮನ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು 100 ವರ್ಷಗಳನ್ನು ಪೂರೈಸಿದ ಈ ಶುಭ ಘಳಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿಜೀ ಅವರು ಆಗಸ್ಟ್ 15ರಂದು ಕೆಂಪುಕೋಟೆ ಮೇಲೆ ಭಾಷಣ ಮಾಡುವಾಗ ಆರೆಸ್ಸೆಸ್ ಅನ್ನು ಪ್ರಶಂಸೆ ಮಾಡಿದ್ದರು ಎಂದು ಗಮನ ಸೆಳೆದರು.
 
ನಿಸ್ವಾರ್ಥವಾಗಿ ದೇಶವನ್ನು ಕಟ್ಟುವ ಮತ್ತು ಯುವಜನರಲ್ಲಿ ರಾಷ್ಟ್ರಭಕ್ತಿಯನ್ನು ಮೂಡಿಸುವ ಪ್ರಾಮಾಣಿಕ ಕೆಲಸವನ್ನು ಆರೆಸ್ಸೆಸ್ ಮಾಡುತ್ತ ಬಂದಿದೆ. ಕೇವಲ ಕರ್ನಾಟಕ, ಭಾರತವಷ್ಟೇ ಅಲ್ಲ; ಜಗತ್ತಿನ 40ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆರೆಸ್ಸೆಸ್ ಚಟುವಟಿಕೆ ನಡೆಯುತ್ತಿದೆ ಎಂದು ವಿವರಿಸಿದರು.
ಆರೆಸ್ಸೆಸ್ ಅನ್ನು ನಿಷೇಧಿಸುವುದು ಯಾರಿಂದಲೂ ಸಾಧ್ಯವಿಲ್ಲ; ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಹೆಚ್ಚಿನ ಅಸ್ತಿತ್ವ ಇಲ್ಲದ ಸಂದರ್ಭದಲ್ಲೂ ಆರೆಸ್ಸೆಸ್ ಅನ್ನು ನಿಷೇಧಿಸಿದ್ದ ಕಾಂಗ್ರೆಸ್ ಪಕ್ಷವು ಬಳಿಕ ನಿಷೇಧವನ್ನು ಹಿಂಪಡೆಯಬೇಕಾಯಿತು. ಈಗ ಬಿಜೆಪಿಯು ನರೇಂದ್ರ ಮೋದಿಜೀ ಅವರ ದಿಟ್ಟ ನಾಯಕತ್ವವನ್ನು ಹೊಂದಿದೆ. ದೇಶದ ಅನೇಕ ರಾಜ್ಯಗಳಲ್ಲಿ ಬಿಜೆಪಿ ಸರಕಾರವೂ ಇದೆ. ಇಂಥ ಸಂದರ್ಭದಲ್ಲಿ ಆರೆಸ್ಸೆಸ್ ನಿಷೇಧದ ಮಾತು ಮೂರ್ಖತನದ ಪರಮಾವಧಿ ಎಂದು ಟೀಕಿಸಿದರು.
 
ಪ್ರಿಯಾಂಕ್ ಖರ್ಗೆಯವರು ನಿಮ್ಮ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಾಧನೆಗಳು, ಸುಧಾರಣೆಯನ್ನು ರಾಜ್ಯದ ಜನತೆಯ ಮುಂದೆ ಬಿಚ್ಚಿಡಿ ಎಂದು ಬಿ.ವೈ.ವಿಜಯೇಂದ್ರ ಅವರು ಮನವಿ ಮಾಡಿದರು.
ಕಳೆದ 50-60 ವರ್ಷಗಳಿಂದ ಗುಲ್ಬರ್ಗ ಜಿಲ್ಲೆ ನಿಮ್ಮ ಕುಟುಂಬದ ಹಿಡಿತದಲ್ಲಿದೆ. ಆ ಜಿಲ್ಲೆಯಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದೀರಿ? ಗುಲ್ಬರ್ಗ ಜಿಲ್ಲೆಯು ಶಿಕ್ಷಣ ಕ್ಷೇತ್ರದಲ್ಲಿ ಇಡೀ ರಾಜ್ಯದಲ್ಲಿ ಕೊನೆಯ ಸ್ಥಾನದಲ್ಲಿದೆ. ಯಾಕೆ ಈ ಹಿನ್ನಡೆ ಎಂಬುದನ್ನು ಪ್ರಿಯಾಂಕ್ ಖರ್ಗೆಯವರು ರಾಜ್ಯದ ಜನತೆಯ ಮುಂದೆ ತಿಳಿಸಬೇಕು ಎಂದು ಸವಾಲೆಸೆದರು. 
 
ಕಾಂಗ್ರೆಸ್ ಸರಕಾರವು ತಮ್ಮ ಎರಡೂವರೆ ವರ್ಷಗಳ ವೈಫಲ್ಯವನ್ನು ಮುಚ್ಚಿ ಹಾಕಿಕೊಂಡು ಈ ರೀತಿ ಪ್ರಚಾರ, ಅಪಪ್ರಚಾರ ಮಾಡುತ್ತಿದೆ. ವಿಷಯಾಂತರ ಮಾಡುವ ಕುತಂತ್ರ ಇದರ ಹಿಂದಿದೆ ಎಂದು ಆಕ್ಷೇಪಿಸಿದರು. ಇವರಿಗೆ ಆರೆಸ್ಸೆಸ್ ಮುಟ್ಟುವ ಯೋಗ್ಯತೆಯೂ ಇಲ್ಲ; ನಿಷೇಧ ಅಸಾಧ್ಯ ಎಂದು ಸ್ಪಷ್ಟವಾಗಿ ಹೇಳಿದರು.
 
ಪ್ರಿಯಾಂಕ್ ಖರ್ಗೆಯವರು ತಮಗೆ ಬೆದರಿಕೆ ಕರೆ ಬರುತ್ತಿದೆ ಎನ್ನುತ್ತಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ರೀತಿ ಹೇಳಿಕೆ ಕೊಟ್ಟು ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸ ಅವರಿಂದ ಆಗುತ್ತಿದೆ. ಮುಖ್ಯಮಂತ್ರಿಗಳು ಮೊನ್ನೆ ಡಿನ್ನರ್ ಸಭೆ ಮಾಡಿದ್ದರು; ಅತಿವೃಷ್ಟಿಯಿಂದ ತೊಂದರೆಗೆ ಸಿಲುಕಿದ ಕಲ್ಯಾಣ ಕರ್ನಾಟಕದ ರೈತರ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸ ಆಗಿದೆಯೇ ಎಂದು ಪ್ರಶ್ನಿಸಿದರು.
ರಾಜ್ಯವನ್ನು ಲೂಟಿ ಮಾಡಿ ಬಿಹಾರಕ್ಕೆ ತೆಗೆದುಕೊಂಡು ಹೋಗಿ ಕಾಂಗ್ರೆಸ್ಸ್ ಹೈಕಮಾಂಡಿಗೆ ಖುಷಿ ಪಡಿಸುವ ಕೆಲಸ ಮಾಡಬೇಕು; ಅದರ ಬಗ್ಗೆ ಸಿದ್ದರಾಮಯ್ಯನವರು ತಮ್ಮ ಸಚಿವ ಸಹೋದ್ಯೋಗಿಗಳ ಜೊತೆ ಚರ್ಚೆ ಮಾಡಿದ್ದಾರೆಯೇ ಹೊರತು, ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಟೀಕಿಸಿದರು.
 
ಗುಲ್ಬರ್ಗದಲ್ಲಿ ಲೈಬ್ರೆರಿಯನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ರಾಜ್ಯದ ಇಂದಿನ ಪರಿಸ್ಥಿತಿ. ಇದರ ಬಗ್ಗೆ ಚರ್ಚೆ ಮಾಡಬೇಕಿದೆ. ರಾಜ್ಯದ ರೈತರ ಪರಿಸ್ಥಿತಿ, ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು.
 
ಬೆಂಗಳೂರು ಮಹಾನಗರದಲ್ಲಿ ಇವತ್ತು ಏನಾಗಿದೆ? ಎಂದ ಅವರು, ಕಾಂಗ್ರೆಸ್ ಸರಕಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಛೀ ಥೂ ಎಂದು ಉಗಿಯುತ್ತಿದ್ದಾರೆ. ನಿನ್ನೆ ಬಯೋಕಾನ್‍ನ ಕಿರಣ್ ಮಜುಂದಾರ್ ಷಾ ಅವರ ಹೇಳಿಕೆ ಸಂಬಂಧ ಅವರ ಬಗ್ಗೆ ಕೆಟ್ಟದಾಗಿ ಟೀಕೆ ಮಾಡುತ್ತಿದ್ದಾರೆ. ಹಿಂದೆ ಬಿಜೆಪಿ ಸರಕಾರ ಇದ್ದಾಗ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದರು. ಇದೇ ಮೋಹನ್‍ದಾಸ್ ಪೈ ಅವರು ಟೀಕೆ ಮಾಡಿದ್ದರು. ತಕ್ಷಣ ಯಡಿಯೂರಪ್ಪ ಅವರು ಮೋಹನ್‍ದಾಸ್ ಪೈ ಅವರನ್ನು ಕರೆಸಿಕೊಂಡು ಚಹಾ ಕುಡಿಸಿ ಅವರ ಟೀಕೆ- ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಕೆಲಸ ಮಾಡಿದ್ದರು ಎಂದು ಗಮನ ಸೆಳೆದರು.
 
ಮೋಹನ್‍ದಾಸ್ ಪೈ, ಕಿರಣ್ ಮಜುಂದಾರ್ ಷಾ ಅವರಾಗಲೀ, ಅನೇಕ ದಿಗ್ಗಜರು ತಮ್ಮ ಅಭಿಪ್ರಾಯ ಕೊಡುತ್ತಿದ್ದಾರೆ. ಅದನ್ನು ಸಕಾರಾತ್ಮಕವಾಗಿ ಭಾವಿಸಿ, ಸಮಸ್ಯೆ ಪರಿಹಾರಕ್ಕೆ ಯತ್ನಿಸಬೇಕು; ವಿನಾ ಈ ರೀತಿ ಟೀಕೆ ಮಾಡಿ ಅವರಿಗೆ ಅವಮಾನ ಮಾಡುವುದು ರಾಜ್ಯಕ್ಕೇ ಅವಮಾನ ಮಾಡಿದಂತೆ ಎಂದು ಆಕ್ಷೇಪಿಸಿದರು.
 
ಮೀಟಿಂಗ್‍ಗೆ ಬರಬೇಕಾದರೆ ಗರ್ಭಿಣಿ ಎನ್ನುತ್ತಾರೆ; ಲಂಚ ತೆಗೆದುಕೊಳ್ಳುವಾಗ ಗರ್ಭಿಣಿ ಎನ್ನುವುದಿಲ್ಲ ಎಂದು ಕಾಂಗ್ರೆಸ್ ಶಾಸಕರು ಮಹಿಳಾ ಅಧಿಕಾರಿ ಕುರಿತಂತೆ ಟೀಕಿಸಿದ ಬಗ್ಗೆ ಪತ್ರಕರ್ತರು ಗಮನ ಸೆಳೆದರು. ಅಧಿಕಾರದ ಪಿತ್ಥ ನೆತ್ತಿಗೆ ಏರಿದಾಗ ಈ ರೀತಿ ಮಾತನಾಡಿಸುತ್ತದೆ ಎಂದು ವಿಜಯೇಂದ್ರ ಅವರು ಉತ್ತರ ಕೊಟ್ಟರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ