ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಮತ್ತೊಂದು ಕಡೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ರೈತರಿಗೆ ಪರಿಹಾರ ಕೊಟ್ಟಿಲ್ಲ; ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಪರಿಹಾರ ಕೊಡಿ ಎಂದರೆ ಕೇಂದ್ರ ಸರಕಾರದ ಕಡೆ ಬೆಟ್ಟು ಮಾಡಿ ಕೂತಿದ್ದಾರೆಯೇ ವಿನಾ ರಾಜ್ಯ ಸರಕಾರದಿಂದ ಈ ನಾಡಿನ ರೈತರಿಗೆ ಪರಿಹಾರ, ಅನುಕೂಲ ಸಿಗುತ್ತಿಲ್ಲ ಎಂದು ಟೀಕಿಸಿದರು.
ರಾಜ್ಯ ಸರಕಾರ, ಮುಖ್ಯಮಂತ್ರಿಗಳಿಗೆ ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯವಾಗದೇ ಇದ್ದರೆ, ಈ ಸರಕಾರ ರೈತರ ಪಾಲಿಗೆ ಬದುಕಿದ್ದೂ ಸತ್ತಂತೆ ಎಂದು ಆಕ್ಷೇಪಿಸಿದರು. ಅಭಿವೃದ್ಧಿ ಕೆÀಲಸಗಳು ಆಗುತ್ತಿಲ್ಲ; ಶಾಸಕರು ಪರದಾಡುತ್ತಿದ್ದಾರೆ. ಆಡಳಿತ ಪಕ್ಷದ ಶಾಸಕರು, ಸಚಿವರು ನವೆಂಬರ್ ಕ್ರಾಂತಿಯ ಹೇಳಿಕೆ ಕೊಡುತ್ತಿದ್ದಾರೆ ಎಂದು ದೂರಿದರು.
ರೈತರ ಸಮಸ್ಯೆಗೆ ಪರಿಹಾರ ಕೊಡಿ ಎಂದರೆ ಇವತ್ತು ಸಿಎಂ ಬದಲಾವಣೆ ಚರ್ಚೆ ನಡೆದಿದೆ. ಕಾಂಗ್ರೆಸ್ ಸರಕಾರದ ಕಚ್ಚಾಟದಿಂದ ರಾಜ್ಯದ ಜನತೆ ಸರಕಾರದ ಮೇಲಿನ ವಿಶ್ವಾಸ ಕಳಕೊಂಡಿದ್ದಾರೆ ಎಂದು ವಿಶ್ಲೇಷಿಸಿದರು. ನಾನೇ 5 ವರ್ಷ ಸಿಎಂ ಎಂದು ಮುಖ್ಯಮಂತ್ರಿಗಳು ಹೇಳುವ ಪರಿಸ್ಥಿತಿ ಬಂದು ತಲುಪಿದೆ ಎಂದರೆ, ಆಡಳಿತ ಪಕ್ಷದಲ್ಲಿ ಮುಖ್ಯಮಂತ್ರಿಗಳ ಬಗ್ಗೆ ವಿಶ್ವಾಸ ಹೊರಟುಹೋಗಿದೆ ಎಂದು ವಿಶ್ಲೇಷಿಸಿದರು.