ಬೆಂಗಳೂರು: ಬಹುಶಃ ಮುಖ್ಯಮಂತ್ರಿಗಳಿಗೆ ಚಂದ್ರನ ಪೂಜೆ ಮಾಡುವವರ ಜೊತೆ ಇದ್ದೂ ಇದ್ದೂ ಅಮವಾಸ್ಯೆ, ಹುಣ್ಣಿಮೆ ನಡುವಿನ ವ್ಯತ್ಯಾಸವೇ ಮರೆತು ಹೋಗಿರಬೇಕು ಎಂದು ತಮ್ಮನ್ನು ಅಮವಾಸ್ಯೆ ಎಂದು ಹೀಗೆಳೆದಿದ್ದ ಸಿಎಂ ಸಿದ್ದರಾಮಯ್ಯಗೆ ಸಂಸದ ತೇಜಸ್ವಿ ಸೂರ್ಯ ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಾನ್ಯ ಮುಖ್ಯಮಂತ್ರಿಗಳು ನನ್ನ ಬಗ್ಗೆ ಹಲವು ಬಾರಿ ತಮ್ಮ ಸ್ಥಾನ ಮರೆತು ವೈಯಕ್ತಿಕ ತೇಜೋವಧೆ ಮಾಡಿದ್ದಾರೆ. ಈ ಹಿಂದೆ ಚುನಾವಣೆ ಸಂದರ್ಭದಲ್ಲೂ ಮಾಡಿದ್ದರು. ಈಗಲೂ ಮಾಡಿದ್ದಾರೆ.
ಸಿದ್ದರಾಮಯ್ಯನವರು ಹಿರಿಯರಿದ್ದಾರೆ. ಲೋಕಾನುಭವ ಇರುವವರು ಇದ್ದಾರೆ. ಆದರೆ ಅವರಿಗೆ ಅಮವಾಸ್ಯೆಗೂ ಹುಣ್ಣಿಮೆಗೂ ವ್ಯತ್ಯಾಸ ಗೊತ್ತಿಲ್ವೇನೋ ಎನಿಸುತ್ತದೆ. ಅಮವಾಸ್ಯೆ ದಿನವೂ ಸೂರ್ಯ ಇರುತ್ತದೆ, ಹುಣ್ಣಿಮೆ ದಿನವೂ ಸೂರ್ಯ ಇರುತ್ತಾನೆ. ವರ್ಷದ 365 ದಿನವೂ ಪ್ರಕಾಶ ಮಾಡೋದು ಸೂರ್ಯನೇ.
ಅಮವಾಸ್ಯೆ ದಿನ ಇಲ್ಲದೇ ಇರೋದು ಚಂದ್ರ. ಬಹುಶಃ ಚಂದ್ರನ ನೋಡಿ ಪೂಜೆ ಮಾಡುವವರ ಜೊತೆ ಇದ್ದೂ ಇದ್ದೂ ಅಮವಾಸ್ಯೆ ದಿನ ಸೂರ್ಯ ಇರಲ್ಲ ಎಂದು ಕನ್ ಫ್ಯೂಸ್ ಆಗಿದ್ದೀರಿ. ಚಂದ್ರ ಯಾವ ದಿನ ಇರುತ್ತದೆ, ಇರಲ್ಲ, ಅರ್ಧ ಇರುತ್ತಾನೋ, ಪೂರ್ಣ ಇರುತ್ತಾನೋ ಎಂದೆಲ್ಲಾ ನೋಡಿಕೊಂಡು ಪೂಜೆ ಮಾಡುವವರು ನಾವಲ್ಲ. ನಮಗೆ ಅಮವಾಸ್ಯೆ ದಿನವೂ ಲಕ್ಷ್ಮೀ ಪೂಜೆ ಇದೆ. ಆವತ್ತೂ ಸೂರ್ಯ ಇರುತ್ತಾನೆ. ಮುಂದಿನ ದಿನಗಳಲ್ಲಿ ಅಮವಾಸ್ಯೆ, ಹುಣ್ಣಿಮೆ ಬಗ್ಗೆ ಸರಿಯಾಗಿ ತಿಳಿದುಕೊಂಡು ಮಾತನಾಡಿ. ಸೂರ್ಯ ವರ್ಷದ 365 ದಿನವೂ ಇರುತ್ತಾನೆ. ಹುಣ್ಣಿಮೆ ದಿನ ಎಷ್ಟು ಪ್ರಕಾಶಮಾನವಾಗಿ ಇರುತ್ತಾನೋ ಅಮವಾಸ್ಯೆ ದಿನವೂ ಅಷ್ಟೇ ಪ್ರಕಾಶಮಾನವಾಗಿ ಇರುತ್ತಾನೆ. ಈ ಒಂದು ಬೇಸಿಕ್ ತಿಳಿದುಕೊಂಡು ಮಾತನಾಡಲಿ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.