ಹಣ ಪಡೆದು ಮತ ಹಾಕಿಲ್ಲ,ಗೋವಾ, ಚೆನ್ನೈಗೆ ಹೋಗಿಲ್ಲ: ಬಿಜೆಪಿ ಕೆಲ ನಾಯಕರ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಬುಧವಾರ, 29 ಜೂನ್ 2016 (18:48 IST)
ಬಿಜೆಪಿಯಲ್ಲಿರುವ ಕೆಲವು ನಾಯಕರಂತೆ ಹಣ ಪಡೆದುಕೊಂಡು ಮತ ಹಾಕಿಲ್ಲ. ಹಣಕ್ಕಾಗಿ ಗೋವಾ, ಚೆನ್ನೈಗೆ ಹೋಗಿಲ್ಲ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. 
 
ಬಿಜೆಪಿ ಪಕ್ಷ ಸಂಕಷ್ಟದಲ್ಲಿದ್ದಾಗ ನಾವು ಪಕ್ಷದೊಂದಿಗೆ ಸಹಕರಿಸಿದ್ದೇವೆ. ನನ್ನ ಪಕ್ಷ ನಿಷ್ಠೆಯನ್ನು ಅಳೆಯುವ ತಾಕತ್ತು ಯಾರಿಗೂ ಇಲ್ಲ. ಬಿಜೆಪಿಯೇ ನನ್ನ ಜೀವನ ನನ್ನ ಧ್ಯೇಯ ಎಂದು ಗುಡುಗಿದ್ದಾರೆ. 
 
ಯಾರಿದಂಲೂ ಹಣ ಪಡೆದುಕೊಂಡು ಮತ ಹಾಕಿಲ್ಲ. ನಮ್ಮಲ್ಲು ಹಣ ಪಡೆದು ಮತಹಾಕಿದವರಿದ್ದಾರೆ ಎಂದು ಬಿಜೆಪಿಯ ಕೆಲ ನಾಯಕರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
 
ಬೆಂಗಳೂರಿನಲ್ಲಿ ನಡೆದಿರುವುದು ಬಿಜೆಪಿ ಸಭೆ, ಭಿನ್ನರಸಭೆ, ಅತೃಪ್ತ ಸಭೆಯಲ್ಲ. ಉಡುಪಿ ಸಂಸದೆ ಶೋಭಾ ಕರಂದ್ಲಾಜೆಯವರೊಂದಿಗೆ ಚರ್ಚೆ ನಡೆಸಿಲ್ಲ. ಚರ್ಚೆಯೇ ನಡೆಸಿಲ್ಲ ಎಂದ ಮೇಲೆ ಭಿನ್ನಾಭಿಪ್ರಾಯ ಎಲ್ಲಿಂದ ಬರುತ್ತದೆ. ಕರಂದ್ಲಾಜೆ ಮತ್ತು ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದರು. 
 
ನಾನು ವ್ಯಕ್ತಿಗತ ರಾಜಕಾರಣ ಎಂದೂ ಮಾಡಲ್ಲ. ಪಕ್ಷ ಯಾವ ಸೂಚನೆ ಕೊಡುತ್ತದೆಯೇ ಅದನ್ನು ಪಾಲಿಸುವುದು ನನ್ನ ಕರ್ತವ್ಯ. ಪಕ್ಷದ ಹೈಕಮಾಂಡ್ ನೀಡಿದ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ