ಹಿರಿಯರು, ಮುತ್ಸದ್ಧಿಗಳೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕೆ ಮಾಡುವಷ್ಟು ದೊಡ್ಡವನು ನಾನಲ್ಲ ಅಂತಾ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು,ಅವರ ಬಗ್ಗೆ ಅಪಾರವಾದ ಗೌರವ ಭಾವನೆಯೂ ಇದೆ. ಖರ್ಗೆ ಬಗ್ಗೆ ವ್ಯಂಗ್ಯ ಹೇಳಿಕೆ ಧೃಡಪಡಿಸಿದರೆ ಯಾವುದೇ ಶಿಕ್ಷೆ ಅನುಭವಿಸಲು ನಾನು ಸಿದ್ಧ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಅರಣ್ಯ ಸಚಿವ ಈಶ್ವರ ಖಂಡ್ರೆಯವರ ಬಗ್ಗೆ ಹೇಳುವ ಸಂದರ್ಭದಲ್ಲಿ ಬಾಯ್ತಪ್ಪಿನಿಂದ ಖರ್ಗೆ ಹೆಸರು ಹೇಳಿದ್ದೇನೆಯೇ ಹೊರತು, ಖರ್ಗೆ ಕುರಿತು ಅವಹೇಳನದ ಮಾತುಗಳನ್ನೇ ಆಡಿಲ್ಲ. ಕಾಂಗ್ರೆಸ್ ಮುಖಂಡರು ರಾಜಕಾರಣದ ಸಲುವಾಗಿ ನನ್ನ ಹೇಳಿಕೆ ತಿರುಚಿದ್ದಾರೆ ಎಂದರು. ಡಾ.ಕಸ್ತೂರಿ ರಂಗನ್ ವರದಿ ಪರವಾಗಿ ಅರಣ್ಯ ಸಚಿವರು ಮಾತನಾಡಿದ ಕಾರಣ ಅವರಿಗೆ ಮಲೆನಾಡಿನ ಜನರ ಮತ್ತು ಅರಣ್ಯ ಸಮಸ್ಯೆ ಅರಿವಿಲ್ಲ ಎಂದು ಹೇಳಿದ್ದೇನೆಯೇ ಹೊರತು, ಯಾರ ಜಾತಿ ನಿಂದನೆಯನ್ನೂ ಮಾಡಿಲ್ಲ. ಕಾಂಗ್ರೆಸ್ಸಿಗರು ನನ್ನ ಹೇಳಿಕೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದು ದೂರು ದಾಖಲಿಸಲಾಗಿದೆ. ಇದನ್ನು ಎದುರಿಸುವ ಶಕ್ತಿಯೂ ನನಗಿದೆ ಎಂದು ಹೇಳಿದರು.