ಬೆಂಗಳೂರು: ಜಾತಿ ಗಣತಿ ವರದಿ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ಚರ್ಚೆಯಲ್ಲಿ ತೊಡಗಿದ್ದು, ಇದರಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ದಿ. ರಾಜೀವ್ ಗಾಂಧಿ ಹಾಗೂ ದಿ. ದೇವರಾಜು ಅರಸು ರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ನಾನು ಅಧಿಕಾರದಲ್ಲಿದ್ದಾಗ ಆರಂಭಿಸಿದ್ದ ಜಾತಿ ಗಣತಿ ಸಮೀಕ್ಷೆ ಹಳ್ಳ ಹಿಡಿಯಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಕಾರಣ. ಸಮ್ಮಿಶ್ರ ಸರ್ಕಾರದಲ್ಲಿ ಜಗಳ ಮಾಡುವುದು ಬೇಡ ಎಂದು ನಾನು ಆ ಸಂದರ್ಭದಲ್ಲಿ ಸುಮ್ಮನಿದ್ದೆ ಎಂದು ಹೇಳಿದ್ದಾರೆ.
ನಾನು ಅಧಿಕಾರದಲ್ಲಿದ್ದಾಗ ಆರಂಭಿಸಿದ್ದ ಜಾತಿ ಗಣತಿ ಸಮೀಕ್ಷೆ ಹಳ್ಳ ಹಿಡಿಯಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಕಾರಣ. ಸಮ್ಮಿಶ್ರ ಸರ್ಕಾರದ ಆಡಳಿತವಿದ್ದಾಗ ವರದಿ ಸಿದ್ದವಾಗಿತ್ತು. ಆದರೆ ವರದಿಯನ್ನು ತೆಗೆದುಕೊಳ್ಳದಂತೆ ಹಿಂದುಳಿದ ವರ್ಗಗಳ ಸಚಿವರಾಗಿದ್ದ ಪುಟ್ಟರಂಗ ಶೆಟ್ಟಿ ಅವರಿಗೆ ಹೆಚ್'ಡಿಕೆ ಬೈದಿದ್ರು, ಆ ವರದಿಯಲ್ಲಿ ಪ್ರತಿ ಜಾತಿಯ ಆರ್ಥಿಕ ಸ್ಥಿತಿಗತಿ ಅಂಕಿ ಅಂಶವಷ್ಟೇ ಇರೋದು. ವರದಿ ಸ್ವೀಕರಿಸಲು ಸರ್ಕಾರ ಹಿಂದೇಟು ಹಾಕಿದ್ದೇಕೆ? ಈ ವರದಿ ಯಾವುದೇ ಜನಾಂಗದ ವಿರುದ್ಧವೂ ಇರಲಿಲ್ಲ. ವರದಿ ಸ್ವೀಕರಿಸದಂತೆ ಹೆಚ್'ಡಿಕೆ ಅವರು ಪುಟ್ಟರಂಗಶೆಟ್ಟಿಯನ್ನು ಬೈದಿದ್ದಾಗ ನಾನು ಸಮ್ಮಿಶ್ರ ಸರ್ಕಾರದಲ್ಲಿ ಜಗಳ ಬೇಡ ಎಂದು ಸುಮ್ಮನಿದ್ದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವರದಿ ಕೂಡಲೇ ಅನುಷ್ಠಾನಗೊಳಿಸಬೇಕು. ಹಿಂದುಳಿದ ವರ್ಗಗಳ ಆಯೋಗವು ಯಾವುದೇ ಒಂದು ಜಾತಿ ಪರವಾಗಿ ವರದಿ ಸಿದ್ಧಪಡಿಸಿಲ್ಲ. ಹೀಗಾಗಿ ಬಿಜೆಪಿಯವರು ಹಿಂದುಳಿದ, ಶೋಷಿತ ವರ್ಗಗಳ ಪರವಾಗಿದ್ದರೆ ವರದಿ ಜಾರಿಗೊಳಿಸಲಿ ಎಂದು ಒತ್ತಾಯಿಸಿದ್ದಾರೆ.
ಎಲ್ಲಾ ಜಾತಿಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿಯನ್ನು ಸಮೀಕ್ಷೆ ನಡೆಸಲಾಗಿದೆ. ಸರ್ಕಾರಿ ಶಾಲಾ ಶಿಕ್ಷಕರ ನೆರವಿನಿಂದ ತಯಾರಿಸಿದ ವರದಿಯೇ ಹೊರತು ಖಾಸಗಿಯವರು ಮಾಡಿರುವುದಲ್ಲ. ದೇಶದ ಸಂಪತ್ತು, ಅಧಿಕಾರ ಸಮಾನವಾಗಿ ಹಂಚಿಕೆಯಾಗಲು ಈ ಅಂಕಿ-ಅಂಶ ಅಗತ್ಯ. ಹೀಗಾಗಿ ಮೊಸರಲ್ಲಿ ಕಲ್ಲು ಹುಡುಕುವ ಬದಲು ಬಿಜೆಪಿ ವರದಿ ಸ್ವೀಕರಿಸಿ ಅನುಷ್ಠಾನಗೊಳಿಸಬೇಕು ಎಂದರು.