ಹೆಚ್ಚುವರಿ 200 ಗಸ್ತುವಾಹನ: ಸುಮಾರು 300 ವಾಹನಗಳನ್ನು ಗಸ್ತು ತಿರುಗುವ ಪೊಲೀಸರಿಗೆ ನೀಡಲಾಗಿದೆ. ಹೆದ್ದಾರಿ ಗಸ್ತಿಗೆ 100 ಇನ್ನೋವಾ ವಾಹನಗಳನ್ನು ಕೊಡಲಾಗಿದೆ. ಅಪಘಾತ ಸಂಭವಿಸಿದಾಗ ಗಾಯಾಳುಗಳಿಗೆ ನೆರವಾಗಲು, ಅಪರಾಧಗಳನ್ನು ನಿಯಂತ್ರಿಸಲು ವೇಗ ಹೊಂದಿರುವ ವಾಹನಗಳ ಅಗತ್ಯವಿದೆ ಎಂಬುದನ್ನು ಮನಗಂಡು ಈ ಕ್ರಮ ಕೈಗೊಳ್ಳಲಾಗಿದೆ. ಇನ್ನೂ 200 ವಾಹನಗಳನ್ನು ಸಧ್ಯವೇ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಪೊಲೀಸ್ ಇಲಾಖೆಗೆ ನಮ್ಮ ಸರ್ಕಾರ ಅನೇಕ ಸೌಲಭ್ಯಗಳನ್ನು ಒದಗಿಸಿದೆ. ಕ್ಯಾಂಟೀನ್, ಆರೋಗ್ಯ ತಪಾಸಣೆಗೆ ಸಾವಿರ ರೂ. ನೀಡಲಾಗುತ್ತಿದೆ. ಪೊಲೀಸರ ಮಕ್ಕಳಿಗೆ ಸಿಬಿಎಸ್ ಸಿ ಗುಣಮಟ್ಟದ ಶಾಲೆ ಗಳನ್ನು ಬೆಂಗಳೂರು, ಮೈಸೂರಿನಲ್ಲಿ ತೆರೆಯಲಾಗಿದೆ. ಅದನ್ನು ಎಲ್ಲ ವಲಯಗಳಿಗೆ ವಿಸ್ತರಿಸಲಾಗುವುದು. ಸಿಬ್ಬಂದಿಗೆ ಪ್ರತಿ ತಿಂಗಳು ಎರಡು ಸಾವಿರ ರೂ.ಗಳ ಭತ್ಯೆ ನೀಡಲಾಗುತ್ತಿದೆ. ಬಡ್ತಿ ಅವಕಾಶ ಸಿಗುವಂತೆಯೂ ನೋಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ
ಜನರ ನಿರೀಕ್ಷೆಗೆ ತಕ್ಕಂತೆ ಪೊಲೀಸ್ ಇಲಾಖೆ ಕೆಲಸ ಮಾಡಬೇಕು. ಶಾಂತಿ, ಸುವ್ಯವಸ್ಥೆ ಕಾಪಾಡಬೇಕು. ಅಪರಾಧಗಳನ್ನು ನಿಯಂತ್ರಣ ಮಾಡಬೇಕು. ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗದಿದ್ದರೂ ಅಪರಾಧಗಳನ್ನು ನಿಯಂತ್ರಿಸಿ, ಕಾನೂನು ಬಗ್ಗೆ ಜನರಲ್ಲಿ ಗೌರವ ಬರುವಂತ ಕೆಲಸವನ್ನು ಪೊಲೀಸರು ಮಾಡಬೇಕು. ದಕ್ಷತೆಯಿಂದ ಕೆಲಸ ಮಾಡಲು ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಮುಂದೆಯೂ ಒದಗಿಸಲು ಸರ್ಕಾರ ಬದ್ಧವಾಗಿದೆ. ಹೀಗಾಗಿ ಜನರ ನಿರೀಕ್ಷೆಗೆ ತಕ್ಕಂತೆ ಪೊಲೀಸರು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.