ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬಳಿ ಜಿ.ಆರ್. ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ತೆಲುಗು ನಟಿಯರು, ವಿಐಪಿಗಳು ಸಿಕ್ಕಿಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ಬೆಳಗಿನ ಜಾವದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು ಡ್ರಗ್ಸ್ ಪತ್ತೆಯಾಗಿದೆ. ಈ ವೇಳೆ ತೆಲುಗು ನಟಿಯರಿದ್ದರು ಎನ್ನಲಾಗಿದೆ. ರಾಜಕಾರಣಿಗಳ ನಂಟೂ ಪತ್ತೆಯಾಗಿದೆ. ಕಾನ್ ಕಾರ್ಡ್ ಮಾಲಿಕ ಗೋಪಾಲ ರೆಡ್ಡಿ ಅವರಿಗೆ ಸೇರಿದ ಫಾರ್ಮ್ ಹೌಸ್ ನಲ್ಲಿ ಹೈದರಾಬಾದ್ ಮೂಲದ ವ್ಯಕ್ತಿ ಪಾರ್ಟಿ ಆಯೋಜಿಸಿದ್ದ.
ಪಾರ್ಟಿಯಲ್ಲಿ ಎಂಡಿಎಂಎ ಮಾತ್ರೆ, ಕೊಕೇನ್ ಇತ್ಯಾದಿ ಪತ್ತೆಯಾಗಿದೆ. ಸುಮಾರು 100 ಜನ ಪಾರ್ಟಿಯಲ್ಲಿದ್ದರು ಎನ್ನಲಾಗಿದೆ. ಅವಧಿ ಪಾರ್ಟಿ ನಡೆಸುತ್ತಿದ್ದಾರೆ ಎಂಬ ಅನುಮಾನದ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಡ್ರಗ್ಸ್ ಕೂಡಾ ಪತ್ತೆಯಾಗಿದೆ.
ವಿಶೇಷವೆಂದರೆ ಈ ರೇವ್ ಪಾರ್ಟಿ ಹಿಂದೆ ಆಂಧ್ರ ಮೂಲದ ಶಾಸಕರೊಬ್ಬರ ನಂಟೂ ಪತ್ತೆಯಾಗಿದೆ. ಒಂದು ದಿನದ ಪಾರ್ಟಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಂಧ್ರದಿಂದ ನಟಿಮಣಿಯರನ್ನು ಕರೆಸಿಕೊಳ್ಳಲಾಗಿತ್ತು ಎನ್ನಲಾಗಿದೆ. ಇದೀಗ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.