ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಸಂಕ್ರಾಂತಿ ಆಚರಣೆ

ಭಾನುವಾರ, 16 ಜನವರಿ 2022 (20:22 IST)
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಕೇರಿಯ ಮೃತ್ಯುಂಜಯ ಶಾಖೆ ವತಿಯಿಂದ ಸಂಕ್ರಾಂತಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರ್‌ಎಸ್‌ಎಸ್ ಪ್ರಮುಖರಾದ ಡಾ. ಮೇಚಿರ ಸುಭಾಷ್ ನಾಣಯ್ಯ ಅವರು, ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರವನ್ನು ಕಲಿಸಿಕೊಡುವ ಪ್ರಯತ್ನವನ್ನು ಪೋಷಕರು ಮಾಡಬೇಕೆಂದು ಕರೆ ನೀಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಯಲ್ಲಿ ಮಕ್ಕಳು ಕನಿಷ್ಟ ಒಂದು ಗಂಟೆ ತೊಡಗಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕೆಂದು ತಿಳಿಸಿದರು.
ಸಂಘದ ಸ್ವಯಂ ಸೇವಕ ಹಾಗೂ ವೈದ್ಯಕೀಯ ಕಾಲೇಜು ವಿದ್ಯಾರ್ಥಿ ಲಿಖಿತ್ ಮಾತನಾಡಿ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಈ ದಿನದಿಂದ ಪ್ರಕೃತಿಯಲ್ಲಿ ಹಲವು ಬದಲಾವಣೆಗಳು ಘಟಿಸುತ್ತವೆ. ಸೂರ್ಯನು ಪ್ರಜ್ವಲಿಸಲು ಆರಂಭಿಸುತ್ತಾನೆ. ಅದೇ ರೀತಿ ಮಾನವ ಕೂಡಾ ತನ್ನ ಬದುಕಿನಲ್ಲಿ ಏಳಿಗೆಯನ್ನು ಸಾಧಿಸಿ ಸದೃಢ ಸಮಾಜವನ್ನು ನಿರ್ಮಿಸುವಂತಾಗಲಿ ಎಂದರು.
ಮೇಲು, ಕೀಳು ಮತ್ತು ಜಾತಿ ಪದ್ಧತಿಗಳನ್ನು ಮೀರಿ ಹಿಂದೂ ಸಮಾಜ ಎದ್ದು ನಿಂತಾಗ ಮಾತ್ರ ದೇಶ ವೈಭವವನ್ನು ಕಾಣಲು ಸಾಧ್ಯವೆಂದು ಅವರು ಹೇಳಿದರು.
ಸಂಘದ ವಿವಿಧ ಕ್ಷೇತ್ರಗಳ ಸ್ವಯಂ ಸೇವಕರು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ