ಮೇಕೆದಾಟು ಯೋಜನೆಗೆ ಕೇಂದ್ರದ ಅನುಮೋದನೆ: ಸಿಎಂ ಬೊಮ್ಮಾಯಿ ವಿಶ್ವಾಸ
ಮೇಕೆ ದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ತನ್ನ ವಾದವನ್ನು ಮಂಡಿಸಿದ್ದು, ಡಿಪಿಆರ್ ಅನುಮೋದನೆಯಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ದಾವಣೆಗೆರೆಯಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಬಗ್ಗೆ ಯಾವುದೇ ತಡೆಯಾಜ್ಞೆ ಇಲ್ಲ. ಕಾವೇರಿ ನದಿ ನೀರು ಪ್ರಾಧಿಕಾರಕ್ಕೆ ವಿಷಯ ಈಗಾಗಲೇ ಶಿಫಾರಸ್ಸು ಆಗಿ , 15 ಸಭೆಗಳಾಗಿವೆ. ಪ್ರಾಧಿಕಾರಕ್ಕಿರುವ ಅಧಿಕಾರದ ವ್ಯಾಪ್ತಿಯಲ್ಲಿ ಮುಂದಿನ ವಾರ ಸಭೆ ಕರೆಯುವ ಸಾಧ್ಯತೆ ಇದೆ. . ತಮಿಳುನಾಡು ಸರ್ಕಾರ ಹೇಳುವುದರಲ್ಲಿ ಯಾವುದೇ ಕಾನೂನು ಇಲ್ಲ, ಅರ್ಥವೂ ಇಲ್ಲ ಎಂದರು.
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಕ್ರಿಯೆ ನಡೆಯುತ್ತಿದೆ. ಮೊದಲನೇ ಹಂತದಲ್ಲಿ ಭಕ್ತವತ್ಸಲಂ ಸಮಿತಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮೀಸಲಾತಿ ಪ್ರಕ್ರಿಯೆ ನಡೆಸಿದ್ದು, ಇದಾದ ಕೂಡಲೇ ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ವರದಿಯ ಆಧಾರದ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದರು.