ಬೆಂಗಳೂರಿಗೆ ಬಂದಿರುವ ಕೇಂದ್ರ ಸಚಿವರು ಇಂದು ರಾಜ್ಯದ ಕೃಷಿ, ಗ್ರಾಮೀಣಾಭಿವೃದ್ಧಿ, ಕಂದಾಯ ಸಚಿವರ ಜೊತೆ ಕೇಂದ್ರ ಸರಕಾರದ ಯೋಜನೆಗಳ ಸಾಧನೆಯನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್ ಅವರು ಅನುದಾನ ಕೇಳದೇ ಇದ್ದರೂ ನಾವೇ ಘೋಷಣೆ ಮಾಡಿದ್ದೇವೆ. ಬಹಳಷ್ಟು ಅನುದಾನ ಈಗಾಗಲೇ ಕೊಟ್ಟಿದ್ದು, ಅದನ್ನು ಇನ್ನೂ ಕರ್ನಾಟಕ ಸರ್ಕಾರ ಖರ್ಚು ಮಾಡಿಲ್ಲ ಎಂದರು.
ಪ್ರತಿ ಬಡವನಿಗೂ ಮನೆ ಸಿಗಬೇಕು ಎಂಬುದು ಮೋದಿಯವರ ಸಂಕಲ್ಪ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕಳೆದ ಸೆಪ್ಟೆಂಬರ್‍ನಲ್ಲಿ ಕರ್ನಾಟಕಕ್ಕೆ 2,57,246 ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ ಕೊಟ್ಟಿದ್ದೆವು. ಅನುದಾನವನ್ನೂ ಕೊಟ್ಟಿದ್ದೆವು. ಇಂದು ಮತ್ತೆ ಕರ್ನಾಟಕದ ಬಡಜನರಿಗೆ ಮನೆ ಕಟ್ಟಲು ಇರುವ ಗುರಿ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.
ಇಂದು 4,67,580 ಮನೆಗಳನ್ನು ಕಟ್ಟಲು ಒಪ್ಪಿಗೆ ಕೊಟ್ಟಿದ್ದೇವೆ. ಬಡವರ ಸೇವೆಯೇ ಭಗವಂತನ ಸೇವೆ ಎಂಬ ಚಿಂತನೆ ನಮ್ಮದು. ಎಲ್ಲ ಬಡವರಿಗೆ ಮನೆ ನಿರ್ಮಿಸಿ ಕೊಡುವ ಉದ್ದೇಶ ಈಡೇರಿಸಬೇಕಿದೆ. ಅದಕ್ಕಾಗಿ ಮನೆಗಳ ನಿರ್ಮಾಣ ಕಾರ್ಯಕ್ಕೆ ವೇಗ ಕೊಡಲು ಸೂಚಿಸಲಾಗಿದೆ. ಹಿಂದೆ ನೀಡಿದ್ದ ಅನುದಾನ ಪೂರ್ತಿ ಬಳಕೆ ಮಾಡಲು ತಿಳಿಸಲಾಗಿದೆ ಎಂದು ತಿಳಿಸಿದರು.