ಬೆಂಗಳೂರು: ರಾಜ್ಯದಲ್ಲಿ ಕೆರೆಗಳ ಡಿನೋಟಿಫಿಕೇಷನ್ ಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹಿನ್ನಡೆಯಾಗಿದೆ. ಕೆರೆಗಳ ಒತ್ತುವರಿ ಮಾಡುವುದನ್ನು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ವಿರೋಧ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಿಂದ ಕೆರೆಗಳ ಡಿನೋಟಿಫಿಕೇಷನ್ ಪ್ರಸ್ತಾವನೆ ಕೇಂದ್ರದ ಕೈ ತಲುಪಿಲ್ಲ. ಒಂದು ವೇಳೆ ಪ್ರಸ್ತಾವನೆ ಬಂದರೆ ರಾಜ್ಯ ಸರ್ಕಾರದ ವರದಿ ಕೇಳುತ್ತೇವೆ, ಇದನ್ನು ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ಉಮಾಭಾರತಿ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಮಳೆ ಕಡಿಮೆಯಾಗಿದ್ದು, ಜಲಮೂಲಗಳೇ ಬರಿದಾಗುತ್ತಿದೆ. ಅಂತಹ ಸಂದರ್ಭದಲ್ಲಿ ಕೆರೆಗಳನ್ನು ಒತ್ತುವರಿ ಮಾಡುವುದು ಸರಿಯಲ್ಲ. ಇದಕ್ಕೆ ಕೇಂದ್ರದ ಸಂಪೂರ್ಣ ವಿರೋಧವಿದೆ ಎಂದು ಲೋಕಸಭೆಯಲ್ಲಿ ಉಮಾಭಾರತಿ ಹೇಳಿದ್ದಾರೆ. ಕರ್ನಾಟಕ ಸುಮಾರು 1,600 ಕೆರೆಗಳನ್ನು ಡಿನೋಟಿಫೈ ಮಾಡುವ ಕ್ರಮಕ್ಕೆ ಮುಂದಾಗಿತ್ತು. ಇದು ಒಳ್ಳೆಯ ಕ್ರಮವಲ್ಲ ಎಂದು ಸಚಿವರು ಹೇಳಿದ್ದಾರೆ.