ದಲಿತರ ಬಗ್ಗೆ ಮಾತಿನ ಕಾಳಜಿ ಇದ್ದರೆ ಸಾಲದು: ಛಲವಾದಿ ನಾರಾಯಣಸ್ವಾಮಿ

Krishnaveni K

ಬುಧವಾರ, 16 ಜುಲೈ 2025 (16:34 IST)
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ದಲಿತ ಅಧಿಕಾರಿಗಳಿಗೆ ಬಡ್ತಿ ಮೀಸಲಾತಿಯನ್ನು ಕೂಡಲೇ ಕೊಡಬೇಕೆಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ. ದಲಿತರ ಬಗ್ಗೆ ಕೇವಲ ಮಾತಿನಲ್ಲಿ ಕಾಳಜಿ ತೋರದಿರಿ. ಕೆಲಸದಲ್ಲಿ ತೋರಿಸಿ ಎಂದು ಒತ್ತಾಯಿಸಿದರು.
 
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಸಮುದಾಯಗಳ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ತಮಗೆ ಬಡ್ತಿಯಲ್ಲಿ ಮೀಸಲಾತಿ ಕೊಡುತ್ತಿಲ್ಲ ಎಂದಿದ್ದಾರೆ. ಜಾತಿ ಜನಗಣತಿಗೂ ಬಡ್ತಿಗೂ ಏನು ಸಂಬಂಧ ಇದೆ ಎಂದು ಪ್ರಶ್ನೆ ಮಾಡಿದರು. ಬಡ್ತಿಯಲ್ಲಿ ಮೀಸಲಾತಿ ತಡೆದುದೇಕೆ ಎಂದು ಮಲ್ಲಿಕಾರ್ಜುನ ಖರ್ಗೆಯವರೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಅದನ್ನು ನೀಡುವಂತೆ ತಿಳಿಸಿದ್ದಾರೆ ಎಂದು ವಿವರಿಸಿದರು.
 
ಖರ್ಗೆಯವರು ಈಗಲಾದರೂ ದಲಿತರ ಪರವಾಗಿ ಮಾತನಾಡಿದ್ದಾರೆ. ಇದು ಸಂತೋಷದ ವಿಷಯ ಎಂದರು. ನರಿ ಮಾತು ಗಿರಿ ಕೇಳಲ್ಲ ಎಂಬಂತೆ ನಾವೆಷ್ಟೇ ಹೇಳಿದರೂ ಸರಕಾರ ಕೇಳುತ್ತಿರಲಿಲ್ಲ. ಇವತ್ತು ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ ಮೇಲೆ ಸದ್ದು ಕೇಳುವಂತಾಗಿದೆ ಎಂದು ವಿಶ್ಲೇಷಿಸಿದರು.
 
ದಿನ್ನೂರು ಗ್ರಾಮದ ದಲಿತರಿಗೆ ನ್ಯಾಯ ಕೊಡಿ
ಇದೇ ಜುಲೈ 9ರಂದು ಸಿಎಂಗೆ ಇನ್ನೊಂದು ಪತ್ರ ಬರೆದಿದ್ದೇನೆ. ಬೆಂಗಳೂರು ನಗರ ಜಿಲ್ಲೆಯ ಪೂರ್ವ ತಾಲ್ಲೂಕು ಬಿದರಳ್ಳಿ ಹೋಬಳಿಯ ಕಾಡುಗೋಡಿ ಗ್ರಾಮದ ಸರ್ವೇ ನಂಬರ್ 1ರ 711 ಎಕರೆ ಭೂಮಿಯನ್ನು 1950ರಲ್ಲೇ ಕಾಡುಗೋಡಿ ಸಾಮೂಹಿಕ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ನೀಡಿದ್ದರು. ಆಗ ಅದು ಅರಣ್ಯ ಭೂಮಿ ಆಗಿದ್ದು, ಅದನ್ನು ಸರಕಾರಕ್ಕೆ ಹಸ್ತಾಂತರ ಮಾಡಿದ್ದು, ಸರಕಾರದಿಂದ ಈ ಸಂಘದ ಮೂಲಕ ದಲಿತರಿಗೆ ಹಂಚಿಕೆ ಮಾಡಿದ್ದರು. 3 ಎಕರೆ, 4 ಎಕರೆ, 5 ಎಕರೆ ಹೀಗೆ ಕೊಡಲಾಗಿತ್ತು. ಅಲ್ಲಿ ಗ್ರಾಮವೂ ಇರಲಿಲ್ಲ. ಈಗ ದಿನ್ನೂರು ಗ್ರಾಮವಿದ್ದು, ಅಲ್ಲಿ ಒಂದು ಮನೆಯೂ ಇರಲಿಲ್ಲ ಎಂದು ವಿವರಿಸಿದರು.

ಅರಣ್ಯ ಇಲಾಖೆಗೆ ಕೇವಲ 60 ಎಕರೆ ಉಳಿದಿದೆ. ಕೆಐಎಡಿಬಿ 153 ಎಕರೆ ತೆಗೆದುಕೊಂಡಿದೆ. ರೈಲ್ವೆ ಇಲಾಖೆಗೆ 228 ಎಕರೆ, ದೇವಸ್ಥಾನಕ್ಕೆ  3 ಎಕರೆ, ಇಂದಿರಾ ಕ್ಯಾಂಟೀನಿಗೆ ಅರ್ಧ ಎಕರೆ, ದಿನ್ನೂರು ಕಾಲೊನಿಗೆ 20 ಎಕರೆ ಕೊಡಲಾಗಿದೆ. ರಸ್ತೆಗೆ 13 ಎಕರೆ, ಸ್ಮಶಾನಕ್ಕೆ 2.5 ಎಕರೆ, ಪೊಲೀಸ್ ಠಾಣೆಗೆ 4.5 ಎಕರೆ ಕೊಟ್ಟಿದ್ದಾರೆ. ಕೃಷಿಗೆ 120 ಎಕರೆ ಇತ್ತು. ಮೆಟ್ರೊಗೆ 45 ಎಕರೆ ಕೊಡಲಾಗಿದೆ ಎಂದು ಗಮನ ಸೆಳೆದರು.

ಇದೆಲ್ಲವೂ ಅರಣ್ಯ ಭೂಮಿ ಎಂದು ಸರಕಾರ ಹೇಳುತ್ತಿದೆ. ಗೋದಾವರಮನ್ ತಿರುಮಲಪಾಡ್ ಎಂಬ ಅರ್ಜಿದಾರ ಸುಪ್ರೀಂ ಕೋರ್ಟಿನಲ್ಲಿ ಕೇಸ್ ಹಾಕಿದ್ದರು. ಒಮ್ಮೆ ಅರಣ್ಯವಾಗಿದ್ದುದು ಯಾವತ್ತೂ ಅರಣ್ಯ; ಅತಿಕ್ರಮಿತ ಅರಣ್ಯ ಭೂಮಿ ವಾಪಸ್ ಪಡೆಯಲು ತಿಳಿಸಿದ್ದರು. ಅತಿಕ್ರಮಿತ ಭೂಮಿ ವಾಪಸ್ ಪಡೆಯುವಂತೆ ಕೋರ್ಟ್ ಸೂಚಿಸಿದೆ. ಅರಣ್ಯ ಭೂಮಿ ವಾಪಸ್ ಪಡೆಯಲು ನಮ್ಮ ಅಭ್ಯಂತರವಿಲ್ಲ. ದಲಿತರಿಗೆ ನೀಡಿದ್ದ ಭೂಮಿಯನ್ನು 30 ವರ್ಷಗಳ ಹಿಂದೆ ಕೆಐಎಡಿಬಿ ವಶಕ್ಕೆ ಪಡೆದಿದೆ. ಆಗ ಪ್ರತಿ ಎಕರೆಗೆ 30 ಸಾವಿರ ರೂ. ಪರಿಹಾರಧನವನ್ನೂ ನೀಡಿದೆ ಎಂದು ವಿವರಿಸಿದರು.
 
ಕೇವಲ 120-130 ಎಕರೆ ಭೂಮಿ ದಲಿತರ ವಶದಲ್ಲಿವೆ. ಅವನ್ನು ವಶಕ್ಕೆ ಪಡೆದಿದ್ದೀರಿ. ಕೆಐಎಡಿಬಿ, ರೈಲ್ವೆ, ಮೆಟ್ರೊ, ಪೊಲೀಸ್ ಠಾಣೆಗೆ ಕೊಟ್ಟ ಭೂಮಿ ವಾಪಸ್ ಪಡೆಯುತ್ತೀರಾ? ಎಂದು ಪ್ರಶ್ನಿಸಿದರು. ಕೆಐಎಡಿಬಿ ಮೊದಲಾದವರಿಗೆ ಕೊಟ್ಟ ಭೂಮಿ ವಾಪಸ್ ಪಡೆದರೆ ದಲಿತರ ಭೂಮಿ ವಾಪಸ್ ಪಡೆಯಿರಿ. ಇಲ್ಲವಾದರೆ, ಕೆಐಎಡಿಬಿ ಮತ್ತಿತರ ಸಂಸ್ಥೆಗಳಿಗೆ ತೆಗೆದುಕೊಳ್ಳುವ ತೀರ್ಮಾನವನ್ನೇ ದಲಿತರ ಭೂಮಿಗೂ ಜಾರಿಗೊಳಿಸಿ ಎಂದು ಆಗ್ರಹಿಸಿದರು.
 
ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೇನೆ. ಉತ್ತರ ಬಂದಿಲ್ಲ ಎಂದು ಹೇಳಿದರು. 30 ವರ್ಷದಿಂದ ಟೆಂಟ್ ಹಾಕಿ ಹೋರಾಟ ಮಾಡುತ್ತಿದ್ದಾರೆ. ದೇವನಹಳ್ಳಿಯಲ್ಲಿ ರೈತರು 1198 ದಿನ ಹೋರಾಟ ಮಾಡಿದ್ದಕ್ಕೆ ಬಿಟ್ಟು ಕೊಟ್ಟಿದ್ದು, ನಾವು ಸಂತೋಷ ಪಡುತ್ತೇವೆ. ಈ ಸರಕಾರ ದಲಿತ ವಿರೋಧಿ. ದಲಿತರ ಬಗ್ಗೆ ಕಾಳಜಿ ಇಲ್ಲ. ಮತಬ್ಯಾಂಕ್ ಮಾತ್ರ ಬೇಕಿದೆ ಎಂದು ಟೀಕಿಸಿದರು.
 
ನೀವು ಯಾವ ಶಿಷ್ಟಾಚಾರವನ್ನು ಗೌರವಿಸುತ್ತೀರಿ
ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗೆ ನೂರಾರು ಪತ್ರ ಬರೆದಿದ್ದೇವೆ. ಒಂದಕ್ಕೂ ಉತ್ತರ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು. ಶಿವಮೊಗ್ಗದಲ್ಲಿ ಸಭೆಗೆ ಕರೆಯದೆ ಶಿಷ್ಟಾಚಾರ ಉಲ್ಲಂಘಿಸಿದ ಮಾತನಾಡುತ್ತಾರೆ. ನೀವು ಯಾವ ಶಿಷ್ಟಾಚಾರವನ್ನು ಗೌರವಿಸುತ್ತೀರಿ ಮುಖ್ಯಮಂತ್ರಿಗಳೇ ಎಂದು ಕೇಳಿದರು. ನಾನು ವಿಪಕ್ಷ ನಾಯಕನಾಗಿ ಎರಡು ವರ್ಷವಾಗಿದೆ. ನನಗೆ ಸರಕಾರದ ಮನೆ ಕೊಟ್ಟಿಲ್ಲ ಎಂದು ಆರ್.ಅಶೋಕ್ ಅವರು ಆಕ್ಷೇಪಿಸಿದ್ದಾರೆ. ನನಗೂ ಕೊಟ್ಟಿಲ್ಲ. ಆದರೆ, ನಾನು ನಿಮ್ಮನ್ನು ಕೇಳುತ್ತಿಲ್ಲ ಎಂದು ತಿಳಿಸಿದರು.
ನೀವು ಮಜಾವಾದಿಗಳು. ನನಗೊಂದು ಮನೆ ಕೊಡಬೇಕೆಂದು ನಿಮಗೆ ಅನಿಸುವುದಿಲ್ಲ. ನೀವು ಮೊದಲು ಶಿಷ್ಟಾಚಾರ ಪಾಲಿಸಿ; ಆಗ ಬೇರೆಯವರನ್ನು ಪ್ರಶ್ನಿಸುವ ಅವಕಾಶ ನಿಮಗೂ ಇರುತ್ತದೆ ಎಂದು ತಿಳಿಸಿದರು. 
 
ರೈತಪರ ತೀರ್ಮಾನದ ಹಿಂದೆಯೂ ಪಿತೂರಿ?
ನಿನ್ನೆ ಮುಖ್ಯಮಂತ್ರಿಗಳು ದೇವನಹಳ್ಳಿ ಏರೋಸ್ಪೇಸ್‍ಗೆ ಸಂಬಂಧಿಸಿ 1,777 ಎಕರೆ ಭೂಮಿ ಅಧಿಸೂಚನೆ ಆಗಿದ್ದುದನ್ನು ಆ ಪ್ರಾಂತ್ಯದ ರೈತರು 1198 ದಿನಗಳ ಸುದೀರ್ಘ ಹೋರಾಟ ಮಾಡಿದ್ದಾರೆ. ಆದ್ದರಿಂದ ರೈತರ ಜಮೀನು ತೆಗೆದುಕೊಂಡು ತೊಂದರೆ ಮಾಡುವುದು ಬೇಡ; ಇದು ಸುದೀರ್ಘವಾದ ಹೋರಾಟ. ಆ ಕಾರಣಕ್ಕೆ ರೈತಪರ, ದಲಿತ ಪರ ಸಂಘಟನೆಗಳು ಹೋರಾಟ ಮಾಡಿವೆ. ಆದ್ದರಿಂದ ದೇವನಹಳ್ಳಿಗೆ ಸೀಮಿತ ಪ್ರದೇಶವನ್ನು ಕೈಬಿಟ್ಟಿದ್ದಾಗಿ ಹೇಳಿದ್ದಾರೆ ಎಂದು ವಿವರಿಸಿದರು.

ರೈತಪರ ತೀರ್ಮಾನವನ್ನು ಬಿಜೆಪಿ ಯಾವತ್ತೂ ವಿರೋಧಿಸುವುದಿಲ್ಲ ಎಂದರಲ್ಲದೆ, ರೈತಪರ ಹೋರಾಟ ಮಾಡಿದವರು ಯಾರು ಎಂದು ಪ್ರಶ್ನಿಸಿದರು. ಕಮ್ಯುನಿಸ್ಟ್ ಸಂಘಟನೆಗಳು ಹೋರಾಟ ಮಾಡಿವೆ. ಬಹುಶಃ ಅವರನ್ನು ಓಲೈಸಲು ಹೀಗೆ ಮಾಡಿದಂತಿದೆ. ಇದರ ಒಳಗೆ ಕೆಲವು ಪಿತೂರಿಗಳಿವೆ ಎಂದು ಆರೋಪಿಸಿದರು. ಇದೂ ಒಂದು ಮಾಫಿಯ ಎಂದು ದೂರಿದರು. ಅದು ರೈತರ ಫಲವತ್ತಾದ ಭೂಮಿಗಳು; ಆದ್ದರಿಂದ ಇದು ಸ್ವಾಗತಾರ್ಹ ಎಂದರು.

ನೀವು ಕೈಬಿಟ್ಟ ತಕ್ಷಣ ಪಕ್ಕದ ಆಂಧ್ರದವರು ಸಂಪರ್ಕಿಸಲು ಮುಂದಾಗಿದ್ದಾರೆ. 8 ಸಾವಿರ ಎಕರೆ ರೆಡಿ ಇದೆ ಎಂದಿದ್ದಾರೆ. ನೀವು ಬದಲಿ ವ್ಯವಸ್ಥೆ ಬಗ್ಗೆ ಹೇಳಬೇಕಿತ್ತು ಎಂದು ತಿಳಿಸಿದರು.
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ