ಡಿಕೆ ಶಿವಕುಮಾರ್ ಮನೆಗೆ ಹೋಗುವ ರಸ್ತೆ ಗುಂಡಿ ಮುಚ್ಚಿದ ಬಿಜೆಪಿ ನಾಯಕರು

Krishnaveni K

ಬುಧವಾರ, 24 ಸೆಪ್ಟಂಬರ್ 2025 (15:50 IST)
ಬೆಂಗಳೂರು: ರಸ್ತೆ ಗುಂಡಿಗಳ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿರುವ ಬಿಜೆಪಿ ನಾಯಕರು ಇಂದು ಹಲವು ಕಡೆ ರಸ್ತೆ ಗುಂಡಿ ಮುಚ್ಚಿ ಆಕ್ರೋಶ ಹೊರಹಾಕಿದರು. ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ನಾಯಕರು ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಹೋಗುವ ರಸ್ತೆ ಗುಂಡಿಯನ್ನು ಮುಚ್ಚಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಕಾಪಾಡುವುದಕ್ಕೆ ಇದ್ದಾರೆಯೇ? ಅಥವಾ ಲೂಟಿ ಮಾಡಲು ಇದ್ದಾರೆಯೇ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ರಸ್ತೆ ಗುಂಡಿ ಮುಚ್ಚುವ ಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಸರ್ಕಾರದ ಖಜಾನೆ ಖಾಲಿಯಾಗಿದ್ದು, ರಸ್ತೆ ಗುಂಡಿ ಮುಚ್ಚುವುದಕ್ಕೆ ಅವರ ಬಳಿ ಹಣವಿಲ್ಲ; ಅವರಿಗೆ ಇರುವ ಹಣವನ್ನು ನುಂಗಿ ಸಾಕಾಗಿದೆ ಎಂದು ಅವರು ಟೀಕಿಸಿದರು.

ನ್ಯಾಯಾಲಯ ಆದೇಶ ನೀಡಿದ್ದರೂ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಸರ್ಕಾರ ಮಾಡಲಿಲ್ಲ. ಆಗಿದ್ದ ಹಾಗೆ ರಸ್ತೆ ಗುಂಡಿ ಮುಚ್ಚುವ ಕೆಲಸ ಸರ್ಕಾರ ಮಾಡಿದ್ದರೆ ಇಂದು ಈ ಪರಿಸ್ಥಿತಿ ಇರುತ್ತಿರಲಿಲ್ಲ. ಆದರೆ ಸರ್ಕಾರಕ್ಕೆ ಎಷ್ಟು ಬಾರಿ ಹೇಳಿದರು ಕೂಡ ಬಿಜೆಪಿಯವರು ಏನಾದರು ಹೇಳಲಿ ನಾವು ಕೇರ್ ಮಾಡುವುದಿಲ್ಲ ಎಂದು ಹೇಳುತ್ತಾರೆ. ಅಂದರೆ ಬಿಜೆಪಿ ಇರುವುದೇಕೆ?; ಬಿಜೆಪಿ ವಿರೋಧ ಪಕ್ಷವಾಗಿ ಕೆಲಸ ಮಾಡಬಾರದೇ ಎಂದು ಪ್ರಶ್ನಿಸಿದರು. 
 
ಇಂದು ಬೆಂಗಳೂರಿನ ಎಲ್ಲ ಉದ್ಯಮಿಗಳು ರಸ್ತೆ ಗುಂಡಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ಈ ಪರಿಸ್ಥಿತಿಯಿಂದ ಬೆಂಗಳೂರು ಬಿಟ್ಟು ಹೋಗಬೇಕಾಗುತ್ತದೆ ಎಂದು ಟ್ವೀಟ್ ಮಾಡುತ್ತಿದ್ದಾರೆ; ಅಂತಹ ಪರಿಸ್ಥಿತಿ ಸರ್ಕಾರಕ್ಕೆ ಇದ್ದರೆ, ಸರ್ಕಾರವು ರಸ್ತೆಗಳನ್ನು ಸರಿಪಡಿಸಿ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳುವುದನ್ನು ಬಿಟ್ಟು, ಯಾರು ಬೇಕಾದರು ಹೋಗುವವರ ಹೋಗಬಹುದು ಎಂದು ಉದ್ಧಟತನದ ಹೇಳಿಕೆಯನ್ನು ನೀಡಿದ್ದಾರೆ ಎಂದು ಆಕ್ಷೇಪಿಸಿದರು.
ಬೆಂಗಳೂರು ನಗರದ ಮಂತ್ರಿಗಳು ಪ್ರಧಾನಮಂತ್ರಿಗಳ ಮನೆಯ ಮುಂದೆ ಗುಂಡಿ ಇದೆ ಎಂದು ಹೇಳಿಕೆ ನೀಡಿದ್ದಾರೆ. ಗುಂಡಿ ಇರುವ ಬಗ್ಗೆ ಇವರೇನಾದರು ಹೋಗಿ ನೋಡಿದ್ದಾರೆಯೇ? ಎಂದು ಕೇಳಿದರು. ಸರ್ಕಾರದ ಈ ಉದ್ಧಟತನ ಮತ್ತು ಬೆಂಗಳೂರು ನಗರದ ಅಭಿವೃದ್ಧಿ ಮಂತ್ರಿಗಳ ಹೇಳಿಕೆಯನ್ನು ವಿರೋಧಿಸಿ ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ