ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸಂಕ್ರಾಂತಿ ದಿನದಂದು ನಡೆದಿದ್ದ ಕಾರು ಅಪಘಾತದ ಬಗ್ಗೆ ಬಿಜೆಪಿ ನಾಯಕ ಛಲವಾದಿ ನಾರಾಯಣ ಸ್ವಾಮಿ ಮತ್ತೊಮ್ಮೆ ಅನುಮಾನ ವ್ಯಕ್ತಪಡಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಕಾರನ್ನು ಬಟ್ಟೆಯಿಂದ ಮುಚ್ಚಿದ್ದಕ್ಕೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಜನವರಿ 15 ರಂದು ತಮ್ಮ ಸಹೋದರನ ಜೊತೆ ಬೆಳಗಾವಿಯ ನಿವಾಸಕ್ಕೆ ತೆರಳುವಾಗ ಲಕ್ಷ್ಮೀ ಹೆಬ್ಬಾಳ್ಕರ್ ಇದ್ದ ಕಾರು ಮರಕ್ಕೆ ಢಿಕ್ಕಿಯಾಗಿತ್ತು. ಘಟನೆ ನಡೆದ ತಕ್ಷಣದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ನಜ್ಜುಗುಜ್ಜಾಗಿದ್ದ ಕಾರಿನ ಒಳಗೆ ಬಟ್ಟೆಯಿಂದ ಮುಚ್ಚಿದ್ದು ಕಂಡುಬಂದಿತ್ತು.
ಇದನ್ನು ಈಗ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ ಮಾಡಿದ್ದಾರೆ. ನಿನ್ನೆಯೂ ಅಪಘಾತದ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದರು. ಇಂದು ಮತ್ತೊಮ್ಮೆ ಇದರ ಬಗ್ಗೆ ಮಾತನಾಡಿರುವ ಅವರು ಕಾರನ್ನು ಬಟ್ಟೆಯಿಂದ ಮುಚ್ಚಿದ್ದು ಯಾಕೆ ಮತ್ತು ಅಪಘಾತ ನಡೆದ ತಕ್ಷಣ ಕಾರನ್ನು ಅಲ್ಲಿಂದ ಸ್ಥಳಾಂತರಿಸಿದ್ದು ಯಾಕೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾರಿನಲ್ಲಿ ಕೋಟ್ಯಾಂತರ ರೂಪಾಯಿ ಹಣ ಸಾಗಿಸಲಾಗುತ್ತಿತ್ತು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು. ಅಪಘಾತ ಮಾಡಿದ ಡ್ರೈವರ್ ಎಲ್ಲಿ? ಇದನ್ನೆಲ್ಲಾ ನೋಡಿದರೆ ಅನುಮಾನವಾಗುತ್ತಿದೆ ಎಂದು ಅವರು ಹೇಳಿದ್ದಾರೆ.