ನವದೆಹಲಿ: 79 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಪ್ರಧಾನಿ ಮೋದಿ ಮಿಷನ್ ಸುದರ್ಶನ ಚಕ್ರ ಘೋಷಿಸಿದ್ದಾರೆ. ಹೀಗೆಂದರೇನು ಇಲ್ಲಿದೆ ವಿವರ.
ಇಂದು ಕೆಂಪು ಕೋಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ ಆಪರೇಷನ್ ಸಿಂಧೂರ್, ದೇಶದ ಭದ್ರತೆ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ. ಈ ವೇಳೆ ದೇಶದ ಭದ್ರತೆಗಾಗಿ ಮಿಷನ್ ಸುದರ್ಶನ್ ಘೋಷಣೆ ಮಾಡಿದ್ದಾರೆ. ಈ ಮೂಲಕ ಶತ್ರುರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಮಿಷನ್ ಸುದರ್ಶನ್ ಎಂದರೆ ಶ್ರೀಕೃಷ್ಣನ ಸುದರ್ಶನ ಚಕ್ರದಂತೆ ದೇಶದ ರಕ್ಷಣಾ ವ್ಯವಸ್ಥೆಯಾಗಲಿದೆ. ದೇಶದ ಸುತ್ತೂ ಶತ್ರುಗಳ ದಾಳಿಯಾಗದಂತೆ ರಕ್ಷಣೆ ಒದಗಿಸುವುದಾಗಿದೆ. ಇದು ದೇಶ ರಕ್ಷಿಸುವುದಲ್ಲದೆ, ಶತ್ರುಗಳನ್ನು ನಾಶ ಮಾಡುತ್ತದೆ. ಮಹಾಭಾರತ ಯುದ್ಧ ನಡೆಯುತ್ತಿರುವಾಗ ಶ್ರೀಕೃಷ್ಣನು ಸುದರ್ಶನ ಚಕ್ರದಿಂದ ಸೂರ್ಯನ ಬೆಳಕನ್ನು ಹಗಲಲ್ಲಿ ತಡೆಹಿಡಿದಿದ್ದನು. ಇದರಿಂದ ಅರ್ಜುನನಿಗೆ ಜಯದ್ರತನನ್ನು ಕೊಲ್ಲಲು ಸಾಧ್ಯವಾಯಿತು.
ಈಗ ಅದೇ ಮಾದರಿಯಲ್ಲಿ ದೇಶದ ರಕ್ಷಣೆಗೆ ನಾವು ಸುದರ್ಶನ ಚಕ್ರವನ್ನು ನಿರ್ಮಿಸಲಿದ್ದೇವೆ. ಇದು ಪ್ರಬಲವಾದ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿರಲಿದೆ. ಭಾರತದಲ್ಲೇ ತಯಾರಿಸಿದ ವಾಯುರಕ್ಷಣಾ ವ್ಯವಸ್ಥೆಯಾಗಿರಲಿದೆ. ಇದು ಶತ್ರುಗಳ ದಾಳಿಯನ್ನು ತಟಸ್ಥಗೊಳಿಸುವುದಲ್ಲದೆ, ಶತ್ರುಗಳ ಮೇಲೆ ಅದಕ್ಕಿಂತ ವೇಗವಾಗಿ ಪ್ರತಿದಾಳಿ ಮಾಡಿ ಪ್ರತೀಕಾರ ತೀರಿಸಕೊಳ್ಳುವ ವ್ಯವಸ್ಥೆಯಾಗಿರಲಿದೆ ಎಂದು ಮೋದಿ ಹೇಳಿದ್ದಾರೆ.