ರಾಜ್ಯ ಸರ್ಕಾರಕ್ಕೆ ಹಿಂದೂ ಸ್ವಾಮೀಜಿಗಳನ್ನು ಕಂಡ್ರೆ ಆಗಲ್ಲ: ಛಲವಾದಿ ನಾರಾಯಣ ಸ್ವಾಮಿ

Krishnaveni K

ಸೋಮವಾರ, 2 ಡಿಸೆಂಬರ್ 2024 (15:23 IST)
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರನ್ನು ಪಕ್ಕಕ್ಕೇ ಇಟ್ಟುಕೊಳ್ಳುತ್ತದೆ, ಆದರೆ ಇವರಿಗೆ ಹಿಂದೂ ಸ್ವಾಮೀಜಿಗಳನ್ನು ಕಂಡರೆ ಆಗಲ್ಲ ಎಂದು ವಿಧಾನಪರಿಷತ್ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗಷ್ಟೇ ವಕ್ಫ್ ವಿರುದ್ಧ ಹೋರಾಟ ಸಮಾವೇಶದಲ್ಲಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಚಂದ್ರಶೇಖರ ಸ್ವಾಮೀಜಿ ಈ ದೇಶದಲ್ಲಿ ಮುಸ್ಲಿಮರಿಗೆ ಮತ ಹಾಕಲು ಅವಕಾಶ ಕೊಡಬಾರದು ಎಂದಿದ್ದರು. ಈ ಕಾರಣಕ್ಕೆ ಅವರ ವಿರುದ್ಧ ದೂರು ದಾಖಲಾಗಿದೆ. ಈ ಹಿನ್ನಲೆಯಲ್ಲಿ ಇಂದು ಬಿಜೆಪಿ ನಾಯಕರು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಸ್ವಾಮೀಜಿಗಳನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.

ಈ ವೇಳೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ‘ಸ್ವಾಮೀಜಿಗಳು ವಕ್ಫ್ ವಿರುದ್ಧ ಹೋರಾಟದಲ್ಲಿ ಹೇಳಿಕೆ ನೀಡುವಾಗ ಮುಸ್ಲಿಮರ ಬಗ್ಗೆ ಅಂತಹದ್ದೊಂದು ಹೇಳಿಕೆ ನೀಡಿರುವುದು ನಿಜ. ಆದರೆ ಅದಕ್ಕೆ ಅವರು ಕ್ಷಮೆ ಕೇಳಿದ್ದೂ ಆಗಿದೆ. ಹಾಗಿದ್ದರೂ ಅವರ ಮೇಲೆ ಎಫ್ಐಆರ್ ಹಾಕಿ ವಿಚಾರಣೆ ನೆಪದಲ್ಲಿ ಠಾಣೆಗೆ ಕರೆಸಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ. ಇದೇ ಕಾಂಗ್ರೆಸ್ ಸರ್ಕಾರ ಈ ಹಿಂದೆ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರನ್ನು ತಮ್ಮ ಪಕ್ಕವೇ ಇಟ್ಟುಕೊಂಡಿತ್ತು. ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಹಿಂದೂ ಸ್ವಾಮೀಜಿಗಳ ಮೇಲೆ ಕ್ಷಮೆ ಕೇಳಿದ ಮೇಲೂ ಕೇಸ್ ಹಾಕಿದೆ.

ಕಾಂಗ್ರೆಸ್ ಹಿಂದೂ ವಿರೋಧಿ ಧೋರಣೆ ಇದರಲ್ಲೇ ಮತ್ತೊಮ್ಮೆ ಸಾಬೀತಾಗಿದೆ. ಈ ಸರ್ಕಾರಕ್ಕೆ ಹಿಂದೂ ಸ್ವಾಮೀಜಿಗಳನ್ನು ಕಂಡರೆ ಆಗಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ. ಬಿವೈ ವಿಜಯೇಂದ್ರ, ಡಾ ಸಿಎನ್ ಅಶ್ವತ್ಥ ನಾರಾಯಣ ಸೇರಿದಂತೆ ಬಿಜೆಪಿ ನಾಯಕರ ನಿಯೋಗ ಇಂದು ಸ್ವಾಮೀಜಿಗಳನ್ನು ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ