ಹೈಕಮಾಂಡ್ ನೋಟಿಸ್ ಕೊಟ್ಟ ಬಗ್ಗೆ ಬಸನಗೌಡ ಯತ್ನಾಳ್ ಹೇಳಿದ್ದೇನು

Krishnaveni K

ಸೋಮವಾರ, 2 ಡಿಸೆಂಬರ್ 2024 (11:27 IST)
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಬಂಡಾಯವೆದ್ದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಹೈಕಮಾಂಡ್ ಶೋಕಾಸ್ ನೋಟಿಸ್ ನೀಡಿದೆ. ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ಬಣ ಮತ್ತು ಯತ್ನಾಳ್ ಬಣದ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಮೊನ್ನೆಯಷ್ಟೇ ದೆಹಲಿಗೆ ತೆರಳಿದ್ದ ಬಿವೈ ವಿಜಯೇಂದ್ರ ಹೈಕಮಾಂಡ್ ಗೆ ಯತ್ನಾಳ್ ಬಣದ ವಿರುದ್ಧ ದೂರು ನೀಡಿದ್ದರು. ಸಾರ್ವಜನಿಕವಾಗಿ ತಮ್ಮ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇದರ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಈಗ ಯತ್ನಾಳ್ ಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಪಕ್ಷದ ಶಿಸ್ತು ಉಲ್ಲಂಘಸಿರುವ ನಿಮ್ಮ ವಿರುದ್ಧ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ಕಾರಣ ನೀಡಿ ಉತ್ತರಿಸುವಂತೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ನೋಟಿಸ್ ಗೆ ಉತ್ತರ ನೀಡದೇ ಇದ್ದರೆ ಮುಲಾಜಿಲ್ಲದೇ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದೆ.

ಇದಕ್ಕೀಗ ಯತ್ನಾಳ್ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ‘ಬಿಜೆಪಿ ಶಿಸ್ತು ಸಮಿತಿ ನೀಡಿರುವ ನೋಟಿಸ್ ಗೆ ನಾನು ಉತ್ತರಿಸಲಿದ್ದೇನೆ. ಅಲ್ಲದೆ ಪ್ರಸಕ್ತ ರಾಜ್ಯ ಬಿಜೆಪಿಯ ಸ್ಥಿತಿ ಗತಿ ಬಗ್ಗೆಯೂ ವಿವರಣೆ ನೀಡಲಿದ್ದೇನೆ. ಹಿಂದುತ್ವ, ವಕ್ಫ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ’ ಎಂದಿದ್ದಾರೆ. ಈಗ ಯತ್ನಾಳ್ ಯಾವ ಪ್ರತಿಕ್ರಿಯೆ ನೀಡುತ್ತಾರೆ ಮತ್ತು ಅವರ ವಿರುದ್ಧ ಬಿಜೆಪಿ ಶಿಸ್ತು ಸಮಿತಿ ಯಾವ ನಿರ್ಧಾರಕ್ಕೆ ಬರುತ್ತದೆ ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ