ಇದು ಎಲ್ಲರಿಗೂ ಖಷಿ ಕೊಡುವ ಬಜೆಟ್: ಛಲವಾದಿ ನಾರಾಯಣಸ್ವಾಮಿ

Krishnaveni K

ಶನಿವಾರ, 1 ಫೆಬ್ರವರಿ 2025 (13:59 IST)
ಬೆಂಗಳೂರು: ಬಡವರು, ಮಧ್ಯಮ ವರ್ಗದವರಿಗೆ ಅತಿ ಹೆಚ್ಚಿನ ಅನುಕೂಲತೆಗಳನ್ನು ಮಾಡಿಕೊಟ್ಟಿರುವ ಈ ಬಜೆಟ್‌ ರಾಷ್ಟ್ರದ ಜನತೆಗೆ ಖುಷಿ ತಂದಿದೆ.  ಪರಿಶಿಷ್ಟ ಜಾತಿ ವರ್ಗಗಳಿಗೆ, ಕಾರ್ಖಾನೆ, ಸ್ಟಾರ್ಟಪ್‌ಗಳನ್ನು ಮಾಡುವವರಿಗೆ 20,000 ಕೋಟಿ ರೂ. ಸಾಲವಾಗಿ ಕೊಡುವ, ಅನುದಾನ ಕೊಡುವ ಪ್ರಸ್ತಾವ ಸ್ವಾಗತಾರ್ಹ. ಹಿಂದೆಂದೂ ಇಲ್ಲದಂತಹ ಈ ಪ್ರಸ್ತಾವದಿಂದ ಪರಿಶಿಷ್ಟ ಜಾತಿ ವರ್ಗದವರಿಗೆ, ವಿಶೇಷವಾಗಿ ಯುವಕರಿಗೆ ಬಹಳ ಅನುಕೂಲ ಆಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಹೇಳಿದರು.
 
ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2025 ಮಂಡನೆಯಾದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನಿಡಿದ ಅವರು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತವನ್ನು ವಿಶ್ವದ ನಾಲ್ಕನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿ ರೂಪಿಸಲು ಅಗತ್ಯವಿರುವ ಕ್ರಮಗಳನ್ನು ಬಜೆಟ್‌ನಲ್ಲಿ ಕೈಗೊಂಡಿದ್ದಾರೆ ಎಂದು ನುಡಿದರು.
 
ಅಂಗನವಾಡಿ ಕಾರ್ಯಕರ್ತರನ್ನು  ಗಮನದಲ್ಲಿರಿಸಿ ಆ ಹೆಣ್ಣುಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುವ ಒತ್ತು ಕೊಟ್ಟಿದೆ. ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿಗೆ ಮಹತ್ವ ನೀಡಿ, ಐಐಟಿ ಓದುವವರಿಗೆ 6 ಸಾವಿರ ಸೀಟುಗಳನ್ನು ಹಾಗೂ 10 ಸಾವಿರ ಮೆಡಿಕಲ್ ಸೀಟುಗಳನ್ನು ಹೆಚ್ಚಳ ಮಾಡಿದ್ದಾರೆ ಎಂದು ನಾರಾಯಣ ಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
 
ವಿಶೇಷ ಎಂದರೆ ಮಧ್ಯಮ ವರ್ಗದ- ವೇತನದಾರರಿಗೆ ಮೊದಲು 7 ಲಕ್ಷಕ್ಕೆ ತೆರಿಗೆ ಕಟ್ಟಬೇಕಿತ್ತು. ಈಗ 12 ಲಕ್ಷದ ವರೆಗೆ ಯಾರಿಗೂ ತೆರಿಗೆ ಇರುವುದಿಲ್ಲ. ಪತ್ರಕರ್ತರೂ ಸೇರಿದಂತೆ ತಿಂಗಳುಗೆ 1 ಲಕ್ಷದ ವರೆಗೆ ಸಂಬಳ ಪಡೆಯುವವರಿಗೆ ವಿನಾಯಿತಿ ಸಿಕ್ಕಿದೆ. 18 ಲಕ್ಷ ಆದಾಯ ಇರುವವರಿಗೆ 70,000 ರೂ ಮಾತ್ರ ತೆರಿಗೆ. 25 ಲಕ್ಷದ ವರೆಗೆ ವೇತನದವರಿಗೆ 1.20 ಲಕ್ಷ ತೆರಿಗೆ ಬರುತ್ತದೆ. ಎಲ್ಲರನ್ನೂ ಸರಿದೂಗಿಸಿಕೊಂಡು ಆತ್ಮನಿರ್ಭರ ಭಾರತವನ್ನು ಮಾಡುವಂಥ ಮಹಾನ್ ಕಾರ್ಯಕ್ಕೆ ಪ್ರಧಾನಿ ಮೋದಿ ಅವರ ಸರಕಾರ ಈ ಬಜೆಟ್‌ನಲ್ಲಿ ಒತ್ತು ನೀಡಿದೆ. ವಿಕಸಿತ ಭಾರತವಾಗಿ, 4ನೇ ಅತಿದೊಡ್ಡ ಆರ್ಥಿಕತೆ ಆಗಿ ಬೆಳೆಯುವುದಕ್ಕೆ ವಿತ್ತ ಸಚಿವೆ ಪರಿಪೂರ್ಣ ಶ್ರಮ ಹಾಕಿದ್ದಾರೆ ಎಂದು ನಾರಾಯಣ ಸ್ವಾಮಿ ನುಡಿದರು.
 
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಉತ್ತಮ ಆಯವ್ಯಯ ಮಂಡಿಸಿದ್ದಾರೆ. ಆದರೂ ಕಾಂಗ್ರೆಸ್‌ನವರು ಟೀಕೆ ಮಾಡ್ತಾರೆ.  ಮಾನ್ಯ ಸಿದ್ದರಾಮಯ್ಯನವರೇ, ನಿಮ್ಮ ವ್ಯಂಗ್ಯವನ್ನು ಬಿಟ್ಟುಬಿಡಿ. ಇದು ನೀವು ಮಾಡುವ ಬಜೆಟ್‌ನಂತಲ್ಲ. ಇದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೈಗನ್ನಡಿಯಾಗಿರುವ ಬಜೆಟ್. ನೀವು ಒಪ್ಪದಿದ್ದರೂ ಪರವಾಗಿಲ್ಲ. ನೀವು ಸುಳ್ಳು ಹೇಳುತ್ತಿದ್ದೀರಿ. ನಿಮ್ಮ ರಿಚ್ ಲೇಡಿ ದೇಶದ ಘನತೆವೆತ್ತ ರಾಷ್ಟ್ರಪತಿಗಳನ್ನು ಯಾವ ರೀತಿ  ಪೂರ್ ಲೇಡಿ ಅಂತ ಟೀಕಿಸಿದರು ಎಂಬುದನ್ನು ನೆನಪಿಸಿಕೊಳ್ಳಿ. ನಿಮ್ಮ ಬಾಯಿ ಇಷ್ಟೊಂದು ಹೊಲಸಾಗಬಾರದು ಎಂದು ನಾರಾಯಣ ಸ್ವಾಮಿ ಚಾಟಿ ಬೀಸಿದರು.
 
ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸ್ಟಾರ್ಟಪ್ ಸೆಂಟರ್‍‌ಗಳನ್ನು ತೆರೆಯಲಾಗಿದೆ. ಇದುವರೆಗೂ ಅಂತಹ ವ್ಯವಸ್ಥೆ ಇರಲಿಲ್ಲ. ಇದನ್ನು ಹೊರತುಪಡಿಸಿ ನಮ್ಮ ಬೇಡಿಕೆಗಳಿದ್ದರೆ ಖಂಡಿತವಾಗಿಯೂ ಕೇಂದ್ರ ಸರಕಾರಕ್ಕೆ ಸಲ್ಲಿಸಬಹುದು ಎಂದು ಅವರು ತಿಳಿಸಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ