ಒಂದೇ ಗ್ರಾಮದಲ್ಲಿ 100ಕ್ಕೂ ಹೆಚ್ಚು ಜನರಿಗೆ ಚಿಕನ್ ಗುನ್ಯಾ!

ಮಂಗಳವಾರ, 23 ಮೇ 2023 (14:30 IST)
ಯಾದಗಿರಿ : ಜಿಲ್ಲೆಯ ಹುಣಸಗಿ ತಾಲೂಕಿನ ಬೈಲಾಪುರ ತಾಂಡಾದ ಒಂದೇ ಗ್ರಾಮದಲ್ಲಿ 100 ಕ್ಕೂ ಹೆಚ್ಚು ಜನರಿಗೆ ಚಿಕನ್ ಗುನ್ಯಾ ಬಾಧಿಸಿದೆ.
 
ಬೈಲಾಪುರ ತಾಂಡಾದ 100ಕ್ಕೂ ಹೆಚ್ಚು ಜನರಿಗೆ ಚಿಕನ್ ಗುನ್ಯಾ ಬಾಧಿಸಿದ್ದು, ಜನರು ಹಾಸಿಗೆ ಹಿಡಿದಿದ್ದಾರೆ. ಬೈಲಾಪುರ ತಾಂಡಾದಲ್ಲಿ 150 ಕುಟುಂಬಗಳಿವೆ. ಅದರಲ್ಲಿ 100ಕ್ಕೂ ಅಧಿಕ ಜನರಿಗೆ ಚಿಕನ್ ಗುನ್ಯಾ ಖಾಯಿಲೆ ಬಂದಿದ್ದು, ಖಾಯಿಲೆಗೆ ತುತ್ತಾಗಿರುವ ಜನ ನಡೆಯಲಾಗದ ಪರಿಸ್ಥಿತಿಯಲ್ಲಿದ್ದು ಹಾಸಿಗೆ ಹಿಡಿದಿದ್ದಾರೆ.

ಜ್ವರ, ಕೈ-ಕಾಲು ನೋವು, ತಲೆ ನೋವು ಬಾಧಿಸಿದ್ದರಿಂದ ಗ್ರಾಮದ ಮನೆ, ದೇವಾಲಯ, ರಸ್ತೆ ಬಳಿಯೇ ರೋಗಿಗಳು ಮಲಗಿದ್ದಾರೆ. ಇನ್ನೂ ಬಹುತೇಕ ನಿತ್ಯ ಕೂಲಿ ಮಾಡಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಇಡೀ ಗ್ರಾಮಕ್ಕೆ ಚಿಕನ್ ಗುನ್ಯಾ ಅಟ್ಯಾಕ್ ಆಗಿರುವುದರಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರಿತಪಿಸುವಂತಾಗಿದೆ.

ನೂರಾರು ಜನ ಖಾಯಿಲೆಯಿಂದ ಹಾಸಿಗೆ ಹಿಡಿದು ತಿಂಗಳುಗಳೇ ಕಳೆದಿದ್ದರೂ ಇದವರೆಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ತಿಳಿದುಬಂದಿದೆ. ಎಯ್ಡೀಸ್ ಇಜಿಪ್ಟಿ ಮತ್ತು ಎಯ್ಡೀಸ್ ಆಲ್ಬೋಪಿಕ್ಟಸ್ ಸೊಳ್ಳೆಗಳು ಈ ವೈರಸ್ ಅನ್ನು ಹಬ್ಬಿಸುತ್ತವೆ. ಈ ಚಿಕನ್ ಗುನ್ಯಾ ವೈರಾಣು ಡೆಂಗೇ ಜ್ವರಕ್ಕೆ ಹೋಲುವಂತಹ ಲಕ್ಷಣಗಳಿರುವ ಖಾಯಿಲೆಯನ್ನು ಉಂಟುಮಾಡುತ್ತದೆ ಎನ್ನುವ ಅರಿವಿದ್ದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ