ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟ ಎಂದರೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ. ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು, ಪರೀಕ್ಷೆ ಬರೆದು ರಿಸಲ್ಟ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ಕೊನೆಗೂ ತಮ್ಮ ಫಲಿತಾಂಶವನ್ನು ಕಂಡು ಖುಷಿಪಟ್ಟಿದ್ದಾರೆ. ಈ ಬಾರಿ ಪರೀಕ್ಷೆಯಲ್ಲಿ ಯಾರು ಹೆಚ್ಚಿನ ಅಂಕ ಪಡೆದಿದ್ದಾರೆ.2022 -2023 ನೇ ಸಾಲಿನ SSLC ಫಲಿತಾಂಶ ಹೊರಬಿದ್ದಿದೆ. ಸುದ್ದಿಗೋಷ್ಟಿ ನಡೆಸಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಹಾಗು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ರಾಮಚಂದ್ರನ್ ಫಲಿತಾಂಶ ಪ್ರಕಟಿಸಿದರು. ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಗೆ 835102 ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ ಒಟ್ಟು 700619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇಕಡಾ 83.89 ರಷ್ಟು ಫಲಿತಾಂಶ ಬಂದಿದೆ.
ಇನ್ನು 425968 ಬಾಲಕರು ಪರೀಕ್ಷೆ ಬರೆದಿದ್ದು ಇದರಲ್ಲಿ 341108 ಬಾಲಕರು ತೇರ್ಗಡೆಯಾಗಿದ್ದು ಶೇಕಡವಾರು 80.08 ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ. 409134 ಬಾಲಕಿಯರು ಪರೀಕ್ಷೆ ಬರೆದಿದ್ದು 359511 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದು, ಶೇಕಡವಾರು 87.87 ರಷ್ಟು ಫಲಿತಾಂಶ ಬಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬಾಲಕಿಯರದ್ದೇ ಮೇಲುಗೈ ಸಾಧಿಸಿದ್ದಾರೆ.