ಮುಖ್ಯಮಂತ್ರಿ ಬೊಮ್ಮಾಯಿ ಬುಧವಾರ ನವದೆಹಲಿಗೆ; ನಾಲ್ಕು ಸಚಿವ ಸ್ಥಾನಗಳ ವಿಚಾರ ಚರ್ಚೆ

ಮಂಗಳವಾರ, 24 ಆಗಸ್ಟ್ 2021 (12:30 IST)
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಬುಧವಾರ ನವದೆಹಲಿಗೆ ತೆರಳಲಿದ್ದಾರೆ. ನಾಳೆ ಸಂಜೆ ದೆಹಲಿಗೆ ತೆರಳಿ ಹಲವು ನಾಯಕರ ಭೇಟಿಯಾಗಿ, ಉಳಿದಿರುವ ನಾಲ್ಕು ಸಚಿವ ಸ್ಥಾನಗಳ ವಿಚಾರವಾಗಿ ಚರ್ಚೆ ನಡೆಸುವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ನಾಲ್ಕು ಸಚಿವ ಸ್ಥಾನಗಳ ವಿಚಾರವಾಗಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜತೆ ಚರ್ಚೆ ನಡೆಸುತ್ತೇವೆ ಎಂದು ಅವರು ಹೇಳಿದ್ದಾರೆ.

ಕೇಂದ್ರದ ಆರೋಗ್ಯ ಸಚಿವರು, ವಿತ್ತ ಸಚಿವರು, ಜಲಶಕ್ತಿ ಸಚಿವರು ಮತ್ತು ಕೃಷಿ ಸಚಿವರನ್ನು ಭೇಟಿಯಾಗುವೆ. ರಕ್ಷಣಾ ಇಲಾಖೆ ಸಚಿವರ ಭೇಟಿಗೂ ಸಮಯ ಕೇಳಿದ್ದೇನೆ. ನಮ್ಮ ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ವಕೀಲರೊಂದಿಗೆ ಭೇಟಿ ಮಾಡಿ ಸಭೆ ನಡೆಸುತ್ತೇವೆ. ಜಲ ವಿವಾದಗಳ ಬಗ್ಗೆ ಎಜಿ ಸೇರಿದಂತೆ ಸಚಿವರ ಜೊತೆ ಸಭೆಯಲ್ಲಿ ಪಾಲ್ಗೊಳ್ಳುವೆ. ಆಗಸ್ಟ್ 26ರಂದು ಸಭೆ ಸೇರಿ ಚರ್ಚೆ ನಡೆಸುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಈ ಮಧ್ಯೆ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಅವರ ಮನೆಗೆ ಬಂದಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ಸಿಎಂಗೆ ಬೆಳ್ಳಿ ಗದೆ ನೀಡಿ, ಸನ್ಮಾನಿಸಿದರು. ಇನ್ನು, ನೀರಾವರಿ ಯೋಜನೆ ಜಾರಿಗೆ ಜೆಡಿಎಸ್ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ನೆಲ ಜಲ ವಿಷಯ ಬಂದಾಗ ರಾಜಕಾರಣ ಮಾಡದೇ ಹೋರಾಟ ಮಾಡೋಣ. ನಾವೆಲ್ಲಾ ಹೋರಾಟ ಮಾಡಿದ್ದೇವೆ, ಕೆಲಸ ಮಾಡಿದ್ದೇವೆ. ನೆಲ ಜಲ ವಿಷಯದಲ್ಲಿ ನಮ್ಮ ಹೋರಾಟಕ್ಕೆ ಇತಿಹಾಸವೇ ಸಾಕ್ಷಿಯಿದೆ. ಜೆಡಿಎಸ್ನವರಿಗೆ ಹೋರಾಟ ಮಾಡಲು ಸ್ವತಂತ್ರವಿದೆ. ನಮ್ಮ ಹಕ್ಕನ್ನು ಪಡೆಯಲು ನಾವು ಸರ್ವ ಪ್ರಯತ್ನವನ್ನ ಮಾಡ್ತೀವಿ. ಇದರ ಬಗ್ಗೆ ಆತಂಕಪಡುವ ಅವಶ್ಯಕತೆ ಇಲ್ಲ ಎಂದರು.
ಕೊವಿಡ್ 3ನೇ ಅಲೆ ಆತಂಕ ವಿಚಾರವಾಗಿದೆ. ಆದರೆ ಸದ್ಯಕ್ಕೆ ಇನ್ನೂ ಸಚಿವರ ಟಾಸ್ಕ್ಫೋರ್ಸ್ ಪುನಾರಚನೆ ಮಾಡಿಲ್ಲ. ಸಚಿವರ ಟಾಸ್ಕ್ಫೋರ್ಸ್ ರಚಿಸಬೇಕಿದೆ. ತಾಂತ್ರಿಕ ತಜ್ಞರ ಸಮಿತಿ ಮುಂದುವರಿಯಲಿದೆ. ಆ. 30ರಂದು ಸಚಿವರು ಮತ್ತು ಕೊವಿಡ್ ತಜ್ಞರ ಜತೆ ಸಭೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ