ಮಕ್ಕಳಿಗೆ ವಾಚ್ ಬೆಲೆ ಗೊತ್ತಿರುತ್ತೆ, ಸಿಎಂಗೆ ವಾಚ್ ಬೆಲೆ ಗೊತ್ತಿಲ್ಲವಾ?: ಶ್ರೀನಿವಾಸ್ ಪ್ರಸಾದ್

ಸೋಮವಾರ, 17 ಅಕ್ಟೋಬರ್ 2016 (14:30 IST)
ಜಾತ್ರೆಯಿಂದ ಮಕ್ಕಳಿಗೆ ವಾಚ್ ತಂದರೂ ಅದರ ಬೆಲೆ ಗೊತ್ತಿರುತ್ತೆ. ಆದರೆ, ಸಿಎಂ ಸಿದ್ದರಾಮಯ್ಯರಿಗೆ ತಮ್ಮ ಕೈಯಲ್ಲಿ ಕಟ್ಟಿದ್ದ ವಾಚ್ ಬೆಲೆ ಗೊತ್ತಿರಲಿಲ್ಲವೇ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಪ್ರಶ್ನಿಸಿದ್ದಾರೆ.
ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಡವರಿಗೆ ಅನ್ನಭಾಗ್ಯ ನೀಡದ ಮುಖ್ಯಮಂತ್ರಿ ಸಿದ್ದರಾಮಯ್ಯರ ಕೈಯಲ್ಲಿ 80 ಲಕ್ಷ ಬೆಲೆಯ ಹ್ಯೂಬ್ಲೆಟ್ ವಾಚ್. ತಮ್ಮ ಕೈಯಲ್ಲಿ ಕಟ್ಟಿದ್ದ ವಾಚ್ ಬೆಲೆ ಅವರಿಗೆ ಗೊತ್ತಿರಲಿಲ್ಲವೇ ಎಂದು ವಾಗ್ದಾಳಿ ನಡೆಸಿದರು.
 
ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೇ ಕುಟುಂಬದವರಂತೆ ಇದ್ದೆವು. ಸಚಿವ ಸಂಪುಟದಿಂದ ನನ್ನನ್ನು ಕೈಬಿಟ್ಟಾಗ ಒಂದು ಮಾತು ಕೂಡ ಹೇಳಲಿಲ್ಲ. ನನ್ನ ಆರೋಗ್ಯದ ಬಗ್ಗೆಯು ವಿಚಾರಿಸಲಿಲ್ಲ ಸಿಎಂ ಹೀಗೆ ಮಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
 
ನನ್ನ ಅಧಿಕಾರಾವಧಿಯಲ್ಲಿ ಬರ ಪರಿಸ್ಥಿತಿ ನಿಭಾಯಿಸಿರುವ ಕುರಿತು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ಈ ಕುರಿತು ಸಿಎಂ ತೃಪ್ತಿ ವ್ಯಕ್ತಪಡಿಸಲಿಲ್ಲ. ನನ್ನ ಕೆಲಸದ ಕುರಿತು ಸಿಎಂ ಆತ್ಮಸಾಕ್ಷಿಯಿಂದ ಹೇಳಲಿ ಎಂದರು.
 
ಜಾತಿವಾರು ಸ್ಮಶಾನಗಳನ್ನು ಕೈಬಿಟ್ಟು ಸರಕಾರಿ ಸ್ಮಶಾನಗಳನ್ನು ಸ್ಥಾಪಿಸಿದ್ದೇವು. ಅಂತ್ಯ ಸಂಸ್ಕಾರಕ್ಕಾಗಿ ನೀಡುತ್ತಿದ್ದ ಹಣವನ್ನು ಹೆಚ್ಚು ಮಾಡಿದ್ದೇವು. ಈ ಕುರಿತು ಸರ್ವೆಯರ್‌ಗಳಿಗೆ ತರಬೇತಿ ನೀಡಿರುವುದು ನನ್ನ ಸಾಧನೆ ಅಲ್ಲವೇ ಎಂದು ಪ್ರಶ್ನಿಸಿದರು.
 
ಸಚಿವ ಎಚ್‌.ಸಿ.ಮಹಾದೇವಪ್ಪನವರ ಪುತ್ರನಿಗೆ ನನಗಿಂತ ಉತ್ತಮ ಹೆಸರಿದ್ಯಾ ಎಂದು ಪ್ರಶ್ನಿಸಿದ ಅವರು, ಈಗ ನನ್ನ ರಾಜಕೀಯ ಜೀವನದ ಕುರಿತು ಹೇಳಲ್ಲ. ಉಪಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಇನ್ನೂ ನಿರ್ಧರಿಸಿಲ್ಲ. ಬಿಜಿಪಿ ಹಾಗೂ ಜೆಡಿಎಸ್ ಪಕ್ಷದವರೂ ನನಗೆ ಆಹ್ವಾನ ನೀಡಿದ್ದಾರೆ. ಆದರೆ, ಯಾವ ಪಕ್ಷ ಸೇರಬೇಕು ಎಂದು ನಿರ್ಧರಿಸಿಲ್ಲ ಎಂದು ಸ್ಪಷ್ಟಪಡಿಸಿದರು. 
 
ಅರ್ಕಾವತಿ ಡಿನೋಫಿಕೇಶನ್ ಹಗರಣ ತನಿಖೆ ಹಂತದಲ್ಲಿದೆ. ಆದರೆ, ಇಲ್ಲಿಯವರೆಗೂ ತನಿಖೆ ಪೂರ್ಣವಾಗದಿರುವುದರಿಂದ ಸಹಜವಾಗಿಯೇ ಅನುಮಾನ ಹುಟ್ಟಿಸುವಂತಾಗಿದೆ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಶಂಕೆ ವ್ಯಕ್ತಪಡಿಸಿದರು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ