ಸೆ.1ರಿಂದಲೇ 8ನೇ ಕ್ಲಾಸ್ ಮಕ್ಕಳಿಗೆ ತರಗತಿ ಆರಂಭ?

ಶನಿವಾರ, 14 ಆಗಸ್ಟ್ 2021 (09:20 IST)
ಬೆಂಗಳೂರು(ಆ.14): ರಾಜ್ಯದಲ್ಲಿ ಆಗಸ್ಟ್ 23ರಿಂದ 9-12ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭಗೊಂಡರೂ ಹಾಜರಾತಿ ಕಡ್ಡಾಯ ಇರುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

9ರಿಂದ 12ನೇ ತರಗತಿ ಆರಂಭದಿಂದ ಆಗುವ ಪರಿಣಾಮಗಳನ್ನು ಆ.23ರಿಂದ 30ರವರೆಗೆ ನೋಡಿಕೊಂಡು ಬಳಿಕ ತಾಂತ್ರಿಕ ಸಲಹಾ ಸಮಿತಿ ಹಾಗೂ ಆರೋಗ್ಯ ಇಲಾಖೆ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಅವರೊಂದಿಗೂ ಚರ್ಚಿಸಿ ಸೆ.1ರಿಂದ 8ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿ ಆರಂಭದ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಮೇಲೆ ಕೋವಿಡ್ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಭರವಸೆ ನೀಡಿದ್ದಾರೆ. ಹಾಗಾಗಿ ಈಗಾಗಲೇ ನಿರ್ಧರಿಸಿರುವಂತೆ ಆಗಸ್ಟ್ 23ರಿಂದ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಕೋವಿಡ್ ಮಾರ್ಗಸೂಚಿ ಅನುಸರಿಸಿ ಆರಂಭಿಸಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದರು.
ಆ.23ರಿಂದ ಮೊದಲ ಹಂತದಲ್ಲಿ 9, 10, 11 ಮತ್ತು 12ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಆರಂಭವಾದರೂ ಕೂಡ ಹಾಜರಾತಿ ಕಡ್ಡಾಯ ಇರುವುದಿಲ್ಲ. ಪೋಷಕರು ಹಾಗೂ ಮಕ್ಕಳು ಇಚ್ಚೆ ಇದ್ದರೆ ಮಾತ್ರ ತರಗತಿಗೆ ಹಾಜರಾಗಬಹುದು. ಇಲ್ಲದಿದ್ದರೆ ಆನ್ಲೈನ್, ದೂರದರ್ಶನ ಸೇರಿದಂತೆ ಪ್ರಸ್ತುತ ನೀಡಲಾಗುತ್ತಿರುವ ಪರ್ಯಾಯ ಕಲಿಕಾ ಕಾರ್ಯಕ್ರಮಗಳನ್ನೇ ಮುಂದುವರೆಸಬಹುದು ಎಂದು ಹೇಳಿದರು.
ಕಳೆದ ಒಂದೂವರೆ ವರ್ಷದಿಂದ ವಿದ್ಯಾರ್ಥಿಗಳಿಗೆ ಕಲಿಕೆಯ ನಿರಂತರತೆ ತಪ್ಪಿಹೋಗಿದೆ. ಇದು ಹೀಗೇ ಮುಂದುವರೆದರೆ ಅವರ ಶೈಕ್ಷಣಿಕ ಭವಿಷ್ಯದ ಮೇಲೆ ಕೆಟ್ಟಪರಿಣಾಮ ಬೀರುತ್ತದೆ. ಹಾಗಾಗಿ ಶಾಲೆ, ಕಾಲೇಜು ಆರಂಭಿಸಬೇಕಾಗಿದೆ. ಈಗಾಗಲೇ ಶೇ.80ರಷ್ಟುಶಿಕ್ಷಕರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಆ.23ರೊಳಗೆ ಉಳಿದ ಶಿಕ್ಷಕರಿಗೂ ಲಸಿಕೆ ನೀಡಲಾಗುವುದು. ಮಕ್ಕಳು ಮತ್ತು ಪೋಷಕರು ಭಯ ಪಡಬೇಕಿಲ್ಲ. ಕೋವಿಡ್ ಸುರಕ್ಷಾ ಮಾರ್ಗಸೂಚಿಗಳನ್ನು ಅನುಸರಿಸಿ ಶಾಲೆ ಆರಂಭಿಸಲಾಗುವುದು. ಮಂಗಳೂರು, ಸುಳ್ಯ ಸೇರಿದಂತೆ ಕರಾವಳಿ ಜಿಲ್ಲೆಗಳ ಕೆಲವೆಡೆ ಸೋಂಕು ಹೆಚ್ಚುತ್ತಿದೆ. ಅಂತಹ ಕಡೆ ಪರಿಸ್ಥಿತಿ ನೋಡಿಕೊಂಡು ಶಾಲೆಯನ್ನು ಆರಂಭಿಸುವುದಾ ಬೇಡವಾ ಎಂದು ನಿರ್ಧರಿಸುತ್ತೇವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ