ಬೆಂಗಳೂರು: ಸಣ್ಣ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ಲಕ್ಷ ಲಕ್ಷ ತೆರಿಗೆ ಕಟ್ಟಲು ನೋಟಿಸ್ ನೀಡಿದ್ದರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೇ ಸಿಎಂ ಸಿದ್ದರಾಮಯ್ಯ ಮೂರು ವರ್ಷದ ಜಿಎಸ್ ಟಿ ಮನ್ನಾ ಎಂದು ಘೋಷಣೆ ಮಾಡಿದ್ದಾರೆ. ಆದರೆ ಇಷ್ಟಕ್ಕೇ ಸಮಸ್ಯೆ ಬಗೆಹರಿಯಲ್ಲ.
ಜಿಎಸ್ ಟಿ ನೋಟಿಸ್ ಗೆ ಆಕ್ರೋಶ ವ್ಯಕ್ತಪಡಿಸಿ ಸಣ್ಣ ವರ್ತಕರು ನಿನ್ನೆಯಿಂದ ಕೆಲವು ಉತ್ಪನ್ನಗಳ ಮಾರಾಟ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ನಿನ್ನೆ ಸಂಜೆ ಸಿಎಂ ಸಿದ್ದರಾಮಯ್ಯ ಮೂರು ವರ್ಷಗಳ ಜಿಎಸ್ ಟಿ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ಇದರಿಂದಲೇ ಸಮಸ್ಯೆ ಬಗೆಹರಿಯಲ್ಲ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಈಗಾಗಲೇ 9000 ನೋಟಿಸ್ ನೀಡಲಾಗಿದ್ದು ಇದಕ್ಕೆ ಜಿಎಸ್ ಟಿ ಕಟ್ಟಬೇಕಿಲ್ಲ. ಆದರೆ ಭವಿಷ್ಯದಲ್ಲಿ ಇದು ಮತ್ತೆ ತೊಂದರೆ ಕೊಡದು ಎಂದು ಹೇಳಲಾಗದು. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದರೆ ರಾಜ್ಯ ಸರ್ಕಾರ ಕೇಂದ್ರ ಹಣಕಾಸು ಸಚಿವಾಲಯದ ಜೊತೆ ಮಾತುಕತೆ ನಡೆಸಿ ಮತ್ತೆ ಇಂತಹ ಅಸಮರ್ಪಕ ಜಿಎಸ್ ಟಿ ವಸೂಲಾತಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು.
ಇದೀಗ ಬಾಕಿ ಮನ್ನಾ ಮಾಡಲಾಗಿದೆಯಷ್ಟೇ ಹೊರತು ಜಿಎಸ್ ಟಿ ನೋಂದಣಿ ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ವರ್ತಕರೂ ಒಪ್ಪಿಕೊಂಡಿದ್ದಾರೆ. ಜಿಎಸ್ ಟಿ ನೋಟಿಸ್ ಕುರಿತು ವ್ಯಾಪಾರಿಗಳಲ್ಲೇ ಗೊಂದಲಗಳಿವೆ. ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಇದನ್ನು ಸರಿಪಡಿಸುವ ಕೆಲಸ ಮಾಡಲಿದ್ದೇವೆ ಎಂದು ಸಿಎಂ ಭರವಸೆ ನೀಡಿದ್ದಾರೆ.