ಇಂದು ಸಿಎಂ ಬೊಮ್ಮಾಯಿ ದೆಹಲಿ ಕಡೆಗೆ

ಗುರುವಾರ, 23 ಜೂನ್ 2022 (12:03 IST)
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ದೆಹಲಿಗೆ ತೆರಳಲಿದ್ದು,

ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ನೆನೆಗುದಿಗೆ ಬಿದ್ದಿರುವ ಸಂಪುಟ ಕಸರತ್ತಿನ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆಯಿದೆ. ಶುಕ್ರವಾರ ರಾಷ್ಟ್ರಪತಿ ಚುನಾವಣೆಯ ಎನ್ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಬೊಮ್ಮಾಯಿ ಅವರನ್ನು ದೆಹಲಿಗೆ ಆಹ್ವಾನಿಸಲಾಗಿದೆ. ಇದೇ ವೇಳೆ ಅವಕಾಶ ಸಿಕ್ಕರೆ ಬೊಮ್ಮಾಯಿ ಅವರು ಪಕ್ಷದ ವರಿಷ್ಠರನ್ನು ಕಂಡು ಸಂಪುಟ ಕಸರತ್ತಿನ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಂಪುಟ ಕಸರತ್ತಿನ ಬಗ್ಗೆ ಕಳೆದ ಹಲವು ತಿಂಗಳುಗಳಿಂದ ವದಂತಿ ಕೇಳಿಬರುತ್ತಿದ್ದರೂ ಒಂದಿಲ್ಲೊಂದು ಕಾರಣಗಳಿಂದ ಮುಂದೂಡಿಕೆಯಾಗುತ್ತಲೇ ಇದೆ. ಇದೀಗ ರಾಷ್ಟ್ರಪತಿ ಚುನಾವಣೆ ಎದುರಾಗಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ.

ಮೇಲಾಗಿ, ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ ಎದುರಾಗುವ ಸಾಧ್ಯತೆಯಿದೆ. ಹೀಗಿರುವಾಗ ಇಂಥ ಸನ್ನಿವೇಶದಲ್ಲಿ ಸಂಪುಟ ಕಸರತ್ತಿಗೆ ಮುಖ್ಯಮಂತ್ರಿಗಳು ಕೈಹಾಕುವ ಧೈರ್ಯ ತೋರುತ್ತಾರಾ ಎಂಬುದು ಅನುಮಾನವಾಗಿದೆ.

ಇದೇ ವೇಳೆ ಬಹುದಿನಗಳಿಂದ ಕೇಳಿಬರುತ್ತಿರುವ ನಿಗಮ ಮಂಡಳಿ ನೇಮಕ ಕುರಿತೂ ಚರ್ಚೆ ನಡೆಯಬಹುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ