2018ರಲ್ಲಿ 104 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ 2023ರಲ್ಲೂ ಹೆಚ್ಚು ಕಡಿಮೆ ಅಷ್ಟೇ ಸ್ಥಾನವನ್ನು ಪಡೆಯಬಹುದೆಂದು ದೆಹಲಿ ಮೂಲದ ಖಾಸಗಿ ಸಂಸ್ಥೆ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಮಿಷನ್ 150 ಎಂದು ಬಿಜೆಪಿಯ ಎಲ್ಲ ನಾಯಕರು ಹೇಳುತ್ತಿದ್ದರಾದರೂ ಆಡಳಿತ ವಿರೋಧಿ ಅಲೆ, ಸರ್ಕಾರದ ಮೇಲೆ ಬಂದಿರುವ ಗಂಭೀರ ಸ್ವರೂಪದ ಭ್ರಷ್ಟಾಚಾರದ ಆರೋಪಗಳು, ಸಮರ್ಥ ನಾಯಕತ್ವ ಇಲ್ಲದಿರುವುದು, ಗೊಂದಲ ಹೀಗೆ ಹತ್ತು ಹಲವು ಕಾರಣಗಳಿಂದ ಬಿಜೆಪಿ ಮೂರಂಕಿ ದಾಟಬಹುದೆಂದು ಸಮೀಕ್ಷೆ ಹೇಳಿದೆ.
ರಾಜ್ಯದ ಜನತೆಗೆ ಬಿಜೆಪಿ ಬಗ್ಗೆ ಹೇಳಿಕೊಳ್ಳುವಂತಹ ಸದಾಭಿಪ್ರಾಯ ಇಲ್ಲ. ಆದರೆ ಪ್ರಧಾನಿ ನರೇಂದ್ರಮೋದಿಯವರ ವ್ಯಕ್ತಿತ್ವವೇ ಕಮಲ ನಾಯಕರಿಗೆ ಆಸರೆಯಾಗಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ರಾಜಧಾನಿ ಬೆಂಗಳೂರು, ಮೈಸೂರು ಕರ್ನಾಟಕ, ಕರಾವಳಿ, ಮಧ್ಯಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಸೇರಿದಂತೆ 5 ಭಾಗಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು.
ಸಮೀಕ್ಷೆಯಲ್ಲಿ ಬಹುತೇಕ ಮತದಾರರು ದೆಹಲಿ ಬಿಜೆಪಿ ನಾಯಕರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಕೇವಲ ಮತ ಗಳಿಕೆಗಾಗಿ ಮಾತ್ರ ಬಳಸಿಕೊಳ್ಳಲಾಗುತ್ತದೆ. ಅವರಿಗಾದರೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕೆಂದು ಹಲವರು ಒತ್ತಾಯಿಸಿದ್ದಾರೆ.