ಶಾಸಕ ರಾಜುಗೌಡರಿಗೆ ಸಿಎಂ ಕ್ಲಾಸ್

ಭಾನುವಾರ, 9 ಅಕ್ಟೋಬರ್ 2022 (16:55 IST)
ಪರಿಶಿಷ್ಟ ಜಾತಿಗೆ ಮೀಸಲಾತಿ ಪ್ರಮಾಣ ಹೆಚ್ಚಾಗಲು ನ್ಯಾಯಮೂರ್ತಿ ನಾಗಮೋಹನ್ ದಾಸ್ ಹಾಗೂ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರ ಶ್ರಮ ದೊಡ್ಡದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಎಸ್​ಟಿ ಸಮುದಾಯ ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ ಕುರಿತು ಪ್ರತಿಕ್ರಿಯಿಸಿ, ಇದು ಹೋರಾಟದ ಗೆಲುವು. ಶ್ರೀಗಳ ಆಶೀರ್ವಾದದಿಂದ ಸಿಕ್ಕ ಗೆಲುವು ಎಂದು ಬಣ್ಣಿಸಿದರು. ಮುಂಬರುವ ಸವಾಲು ಎದುರಿಸಲು ನಿಮ್ಮ ಆಶೀರ್ವಾದ ಬೇಕು. ನಿಮ್ಮ ಆಶೀರ್ವಾದ ಸಿಗುತ್ತೆ ಎಂಬ ವಿಶ್ವಾಸವಿದೆ. ವಿಧಾನಸೌಧದ ಮುಂದೆ ನಿಂತು ಈ ಮಾತು ಹೇಳುತ್ತಿದ್ದೇನೆ. ನ್ಯಾಯ ಸಮ್ಮತ ತೀರ್ಮಾನ ತೆಗೆದುಕೊಳ್ಳಲು ಸಹಕಾರ ಇರಲಿ ಎಂದು ಮನವಿ ಮಾಡಿದರು.
 
ಸಚಿವ ಶ್ರೀರಾಮುಲು ಮತ್ತು ಶಾಸಕ ರಾಜೂ ಗೌಡ ನನಗೆ ಶ್ರೀರಾಮಚಂದ್ರ ಎಂದಿದ್ದಾರೆ. ಆದರೆ ನಾನು ಶ್ರೀರಾಮಚಂದ್ರನ ಪಾದದ ದೂಳಿಗೂ ಸಮನಲ್ಲ. ದಯವಿಟ್ಟು ಹಾಗೆಲ್ಲ ಹೇಳಬೇಡಿ, ಶ್ರೀರಾಮನಿಗೆ ಯಾರೂ ಸರಿಸಾಟಿಯಲ್ಲ. ನ್ಯಾಯ, ನೀತಿ ಮತ್ತು ನಡತೆಯಲ್ಲಿ ಶ್ರೀರಾಮಚಂದ್ರ ಒಬ್ಬನೇ, ಅವನು ದೊಡ್ಡ ಆದರ್ಶ ಪುರುಷ ಎಂದರು.
 
ತಮ್ಮನ್ನು ಹೊಗಳಿದ ಶಾಸಕ ರಾಜೂಗೌಡ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ನೀನು ತಪ್ಪು ಮಾತಾಡಿದ್ಯಲೇ ರಾಜೂಗೌಡ. ನೀನು ಯಾರಿಗೂ ಗುಲಾಮ ಆಗಬೇಕಿಲ್ಲ. ಬದುಕು ಕೊಟ್ಟ ದೈವಕ್ಕೆ ಮಾತ್ರ ಗುಲಾಮನಾಗಬೇಕು. ಅಪ್ಪಿತಪ್ಪಿ ಇನ್ನೊಮ್ಮೆ ಆ ಶಬ್ದ ಬಂದರೆ ನಿನ್ನ ನಾನು ಬಿಡಲ್ಲ ಎಂದು ನಗುತ್ತಲೇ ಎಚ್ಚರಿಸಿದರು. ಪಾಪ ಅವನು ಭಾವನಾತ್ಮಕವಾಗಿ ಹೇಳಿದ್ದಾನೆ. ಆದರೆ ಭಾವನಾತ್ಮಕತೆಯ ಜೊತೆಗೆ ವಾಸ್ತವಾಂಶ ಮರೆಯಬಾರದು. ಮೀಸಲಾತಿ ಕೊಟ್ಟಿದ್ದು ನಾನಲ್ಲ, ರಾಜ್ಯದ ಜನತೆ. ಇದರ ಹಿಂದೆ ಬುದ್ಧ, ಬಸವ, ವಾಲ್ಮೀಕಿ ಅವರಂಥ ಮಹಾತ್ಮರ ಶಕ್ತಿಯಿದೆ. ಕೇವಲ ಬಾಯಿ ಮಾತಿನಿಂದ ಯಾವುದೇ ಕೆಲಸ ಆಗುವುದಿಲ್ಲ. ಅದಕ್ಕೆ ಬದ್ಧತೆ ಇರಬೇಕು ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ