ಗರ್ಭಕಂಠದ ಕ್ಯಾನ್ಸರ್​ ತಡೆಯಲು ಹೆಣ್ಣುಮಕ್ಕಳಿಗೆ ಹೆಚ್​ಪಿವಿ ಲಸಿಕೆ ನೀಡಲು ರಾಜ್ಯ ಸರ್ಕಾರ ನಿರ್ಧಾರ

Sampriya

ಭಾನುವಾರ, 20 ಜುಲೈ 2025 (12:57 IST)
Photo Credit X
​ಬೆಂಗಳೂರು: ಭಾರತದಲ್ಲಿ ಮಹಿಳೆಯರನ್ನು ಭಾದಿಸುತ್ತಿರುವ ಗರ್ಭಕಂಠದ ಕ್ಯಾನ್ಸರ್‌ ಅನ್ನು ಆರಂಭಿಕ ಹಂತದಲ್ಲೇ​ ತಡೆಯಲು ಕರ್ನಾಟಕ ಸರ್ಕಾರವು 14 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಹ್ಯೂಮನ್ ಪ್ಯಾಪಿಲೋಮವೈರಸ್ ಲಸಿಕೆ ನೀಡಲು ನಿರ್ಧರಿಸಿದೆ. 

ಕಲ್ಯಾಣ ಕರ್ನಾಟಕದ ಮತ್ತು ಗಣಿ ಬಾಧಿತ 20 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ವ್ಯಾಕ್ಸಿನ್ ನೀಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ₹9 ಕೋಟಿ ರೂ. ವೆಚ್ಚ ಮಾಡಲಿದೆ. ತುಮಕೂರು, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಜಿಲ್ಲೆಗಳ 20 ತಾಲೂಕುಗಳಲ್ಲಿ 14 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಹೆಚ್‌ಪಿವಿ ವ್ಯಾಕ್ಸಿನ್ ನೀಡುವಂತೆ ಸೂಚನೆ ನೀಡಲಾಗಿದೆ.

ಹೆಚ್‌ಪಿವಿ ಲಸಿಕೆ ಎಂದರೆ ಹ್ಯೂಮನ್ ಪ್ಯಾಪಿಲೋಮವೈರಸ್  ಲಸಿಕೆ. ಇದು ಗರ್ಭಕಂಠದ ಕ್ಯಾನ್ಸರ್ ಸೇರಿದಂತೆ ಕೆಲವು ಕ್ಯಾನ್ಸರ್ ಮತ್ತು ಜನನಾಂಗದ ನರಹುಣ್ಣುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ ಮಹಿಳೆಯರನ್ನು ಭಾದಿಸುತ್ತಿರುವ ಎರಡನೆಯ ಅತಿ ಹೆಚ್ಚು ಕ್ಯಾನ್ಸರ್ ಆಗಿದೆ. ಲೈಂಗಿಕವಾಗಿ ಸಕ್ರಿಯವಾಗಿರುವವರಿಗೆಲ್ಲ ಒಂದಲ್ಲ ಒಂದು ಈ ಸೋಂಕು ಸಂದರ್ಭಗಳಲ್ಲಿ ಕಾಡಬಹುದು. ಆದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದಾಗ ಈ ಹೆಚ್​ಪಿವಿ ಸೋಂಕು ಯಾವುದೇ ತೊಂದರೆಯನ್ನುಂಟು ಮಾಡುವುದಿಲ್ಲ.

9ರಿಂದ 14ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಇವರಿಗೆ 0 ಮತ್ತು 6 ತಿಂಗಳಲ್ಲಿ 2 ಡೋಸ್ ವೇಳಾಪಟ್ಟಿಯ ಪ್ರಕಾರ ನೀಡಲಾಗುತ್ತದೆ. 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರ ಮತ್ತು ಪುರುಷರಿಗೆ 3 ಡೋಸ್ ವೇಳಾಪಟ್ಟಿ ಅಂದರೆ ಹೆಚ್.ಪಿ.ವಿ ಲಸಿಕೆ 0, 2 ಮತ್ತು 6ತಿಂಗಳಲ್ಲಿ ನೀಡಲಾಗುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ