ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ, ವಿಧಾನ ಪರಿಷತ್ ಸದಸ್ಯರ ನೇಮಕದಲ್ಲಿ ಆರಂಭವಾದ ಸಿಎಂ ಸಿದ್ದರಾಮಯ್ಯ ಮತ್ತು ಡಾ.ಜಿ.ಪರಮೇಶ್ವರ್ ನಡುವಿನ ಜಗಳ ಈಗ ಹೈಕಮಾಂಡ್ ಕದ ತಟ್ಟಿದೆ.
ಲಿಂಗಾಯತ ಕೋಟಾದಡಿ ಸಚಿವ ಸ್ಥಾನ ಅಲಂಕರಿಸಬೇಕಿದ್ದ ತಿಪಟೂರು ಶಾಸಕ ಷಡಕ್ಷರಿ ವಿರುದ್ಧ ಅಕ್ರಮ ಭೂ ಕಬಳಿಕೆ ಆರೋಪ ಕೇಳಿ ಬಂದಿತ್ತು. ಈ ಕಾರಣದಿಂದಲೇ ಏನೋ ಸಂಪುಟ ವಿಸ್ತರಣೆ ವೇಳೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿತ್ತು. ಈ ಹಿನ್ನೆಲೆಯಲ್ಲಿ ಷಡಕ್ಷರಿ ಬದಲು ಗೀತಾರವರಿಗೆ ಸಚಿವ ಸ್ಥಾನ ಸಿಕ್ಕಿತ್ತು. ಹೀಗಾಗಿ ಶಾಸಕರ ವಿರುದ್ಧ ಸಿಎಂ ಅಂಡ್ ಟೀಂ ತಪ್ಪು ಮಾಹಿತಿ ರವಾನಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಇಮೇಲ್ ಮಾಡಿದ್ದಾರೆ.
ಸಿಎಂ ಭಾಗವಹಿಸುವ ಕಾರ್ಯಕ್ರಮಗಳಿಗೆ ಗೈರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದ ಪರಮೇಶ್ವರ್, ಸಿಎಂ ಜತೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥವಾಗುವವರೆಗೆ ಅಂತರ ಕಾಯ್ದುಕೊಳ್ಳುವ ಬಗ್ಗೆ ಸುದೀರ್ಘ ಮಾಹಿತಿ ರವಾನಿಸಿದ್ದಾರೆ ಎನ್ನಲಾಗಿದೆ.
ಸದ್ಯ ಪರಮೇಶ್ವರ್ ಬಿಟ್ಟಿರುವ ಅಸ್ತ್ರಕ್ಕೆ ಸಿಎಂ ಸಿದ್ದರಾಮಯ್ಯ ತತ್ತರಿಸಿ ಹೋಗಿದ್ದಾರೆ. ಇಂದು ದೆಹಲಿಗೆ ತೆರಳಲಿರುವ ಸಿಎಂ ಸಿದ್ದರಾಮಯ್ಯ ಸಂಜೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಭೇಟಿಯಾಗಿ ವಿವರಣೆ ನೀಡಲಿದ್ದಾರೆ.