ಶಾಂತಿ ಕದಡಿದರೆ ಕಠಿಣ ಕ್ರಮ: ಬಿಜೆಪಿಗೆ ಸಿಎಂ, ಗೃಹ ಸಚಿವರ ಎಚ್ಚರಿಕೆ

ಮಂಗಳವಾರ, 5 ಸೆಪ್ಟಂಬರ್ 2017 (08:51 IST)
ಬಿಜೆಪಿ ರಾಜಕೀಯ ಉದ್ದೇಶದಿಂದ ಬೈಕ್ ಜಾಥಾ ಹಮ್ಮಿಕೊಂಡಿದೆ. ಇದೀಗ ತಾನೆ ಶಾಂತಿ ನೆಲೆಸುತ್ತಿರುವ ಮಂಗಳೂರಿನಲ್ಲಿ ಶಾಂತಿ ಕದಡಲು ಬಿಜೆಪಿ ಮುಂದಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿಗೆ ಹೋಗಿ ಸಭೆ ಮಾಡಲಿ, ಪಾದಯಾತ್ರೆ ಮೂಲಕ ತೆರಳಲಿ, ಅದನ್ನ ಬಿಟ್ಟು ಇಲ್ಲಿಂದಲೇ ಬೈಕ್ ರ್ಯಾಲಿ ಹೊರಡುವ ಅಗತ್ಯವೇನಿತ್ತು..? 10-15 ಸಾವಿರ ಬೈಕ್`ಗಳು ಹೊರಟರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಇದರ ಜೊತೆಗೆ ದಾರಿ ಮಧ್ಯೆ, ದುಷ್ಕರ್ಮಿಗಳು ಸಹ ಸೇರಿಕೊಳ್ಳುವ ಸಾಧ್ಯತೆ ಇದ್ದು, ದುಷ್ಕೃತ್ಯ ನಡೆದರೆ ಇದಕ್ಕೆ ಹೊಣೆಯಾರು..? ಎಂದು ಅವರು ಪ್ರಶ್ನಿಸಿದ್ದಾರೆ. ಇದೇವೇಳೆ, ರ್ಯಾಲಿಗೆ ಅವಕಾಶ ನೀಡುವ ಹೊಣೆಯನ್ನ ಆಯಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳಿಗೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಹೊಣೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಈ ಮಧ್ಯೆ, ಮಾಧ್ಯಮವೊಂದರ ಜೊತೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಕೋಮುವಾದಿ ಅಜೆಂಡಾ ಇಟ್ಟುಕೊಂಡು ಮಂಗಳೂರು ಚಲೋ ನಡೆಸುತ್ತಿದ್ದಾರೆ.  ಕಾನೂನು ಸುವ್ಯವಸ್ಥೆ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದು, ಜಾಥಾಗೆ ಅನುಮತಿ ನೀಡುವ ಜವಾಬ್ದಾರಿಯನ್ನ ಅಧಿಕಾರಿಗಳಿಗೆ ನೀಡಿರುವುದಾಗಿ ಸಿಎಂ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ