ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಈಗ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣದ ನಡುವೆ ತಿಕ್ಕಾಟ ಜೋರಾಗಿದೆ. ಡಿಕೆ ಶಿವಕುಮಾರ್ ರನ್ನು ಕಿತ್ತೊಗೆಯಲು ಈಗ ಸಿಎಂ ಬಣ ಒಗ್ಗಟ್ಟಾಗಿದೆ.
ಇನ್ನೊಂದೆಡೆ ತಮ್ಮ ವಿರುದ್ಧ ಮಸಲತ್ತು ಮಾಡುತ್ತಿರುವ ಸಿಎಂ ಬಣದ ವಿರುದ್ಧ ಡಿಕೆ ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಭಾನುವಾರ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿ ಮಾಡಿದ್ದ ಡಿಕೆ ಶಿವಕುಮಾರ್ ತಮ್ಮ ವಿರುದ್ಧ ಕಾರ್ಯಾಚರಣೆ ಮಾಡುತ್ತಿರುವ ರಾಜ್ಯ ನಾಯಕರ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆ ಶಿವಕುಮಾರ್ ರನ್ನು ಕಿತ್ತು ಹಾಕುವುದು ಮತ್ತು ಮತ್ತೊಂದು ಡಿಸಿಎಂ ಹುದ್ದೆ ಸೃಷ್ಟಿಸುವುದು ಸಿಎಂ ಬಣದ ಕಾರ್ಯತಂತ್ರವಾಗಿದೆ. ಈ ಮೂಲಕ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್ ಬಲ ತಗ್ಗಿಸಲು ಯೋಜನೆ ರೂಪಿಸಲಾಗಿದೆ.
ಇದಕ್ಕಾಗಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಜಾರಿಗೆ ತರಲು ಯೋಜನೆ ರೂಪಿಸಿದೆ. ಈ ಚರ್ಚೆಗೆ ಸ್ವತಃ ಗೃಹಸಚಿವ ಜಿ ಪರಮೇಶ್ವರ್ ಸಾಥ್ ನೀಡಿದ್ದಾರೆ. ಇನ್ನೊಂದೆಡೆ ಈಗ ಸಚಿವರಾಗಿರುವ ಈಶ್ವರ ಖಂಡ್ರೆಯವರಿಂದ ರಾಜೀನಾಮೆ ಕೊಡಿಸಿ ಅವರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲು ತಂತ್ರ ರೂಪಿಸಲಾಗಿದೆ. ಅಲ್ಲದೆ ಸಚಿವ ಜಮೀರ್ ಅಹಮ್ಮದ್, ಮಹದೇವಪ್ಪ ಸೇರಿದಂತೆ ಸಿಎಂ ಸಿದ್ದರಾಮಯ್ಯ ಪರ ಇರುವ ಸಚಿವರು ಈಗಾಗಲೇ ಸಿಎಂ ಹುದ್ದೆ ಖಾಲಿಯಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿ ಡಿಕೆ ಶಿವಕುಮಾರ್ ಗೆ ತಿವಿಯುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ಈಗ ಹೈಕಮಾಂಡ್ ಮೆಟ್ಟಿಲೇರಿದೆ.