ಕುರ್ಚಿ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ನಾಟಕ: ಬಿವೈ ವಿಜಯೇಂದ್ರ

Sampriya

ಬುಧವಾರ, 18 ಸೆಪ್ಟಂಬರ್ 2024 (16:39 IST)
ಬೆಂಗಳೂರು: ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಅಲ್ಲಾಡುತ್ತಿರುವ ಸಂದರ್ಭದಲ್ಲಿ ಕುರ್ಚಿ ಉಳಿಸಿಕೊಳ್ಳಲು ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎಐಸಿಸಿ) ಅಧ್ಯಕ್ಷರನ್ನು ಓಲೈಸಲು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಚಿವ ಸಂಪುಟ ಸಭೆಯ ನಾಟಕ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.

ಕಲಬುರ್ಗಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಿನ್ನೆ ಆಗಿರುವ ಸಚಿವ ಸಂಪುಟ ಸಭೆಯಿಂದ ಈ ಭಾಗದ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಈ ಭಾಗಕ್ಕೆ 5 ಸಾವಿರ ಕೋಟಿ ಕೊಡುತ್ತೇವೆ; ಇಲ್ಲಿ ಶಾಲಾ ಕಾಲೇಜು ಮಾಡುತ್ತೇವೆ. 1,100 ಕೋಟಿಯ ಪ್ಯಾಕೇಜ್ ಕೊಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದರಲ್ಲಿ ಹೊಸದೇನೂ ಇಲ್ಲ ಎಂದು ಟೀಕಿಸಿದರು. ಒಂದು ವರ್ಷದ ಹಿಂದೆ ಕೂಡ ಇದೇ ಮಾತುಗಳನ್ನು ಹೇಳಿದ್ದರು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ ಎಂದು ಆಕ್ಷೇಪಿಸಿದರು.

ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 1,500 ಕೋಟಿ ಕೊಟ್ಟಿದ್ದರು. ತದನಂತರ ಬಸವರಾಜ ಬೊಮ್ಮಾಯಿಯವರ ಬಿಜೆಪಿ ಸರಕಾರವು 3 ಸಾವಿರ ಕೋಟಿ ಮತ್ತು ಬಜೆಟ್‍ನಲ್ಲಿ 5 ಸಾವಿರ ಕೋಟಿ ಅನುದಾನ ಪ್ರಕಟಿಸಿತ್ತು. ಅದನ್ನೇ ಸಿದ್ದರಾಮಯ್ಯನವರು ನಿನ್ನೆ ಪುನರುಚ್ಚಾರ ಮಾಡಿದ್ದಾರೆಯೇ ಹೊರತು, ಯಾವುದೇ ಹೊಸ ವಿಚಾರಗಳನ್ನು ಹೇಳಿಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿಗಳು ರಾಜ್ಯಕ್ಕೆ ಮುಖ್ಯಮಂತ್ರಿಯೇ ಅಥವಾ ಕೇವಲ ಬೆಂಗಳೂರು, ಮೈಸೂರಿನ ಸಿಎಂ ಆಗಿದ್ದಾರೆಯೇ ಎಂದು ಜನರು ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಅಥವಾ ಯಾವುದೇ ಸಚಿವರು ಇವತ್ತು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಪ್ರವಾಸ ಮಾಡುತ್ತಿಲ್ಲ. ಏನು ಅಭಿವೃದ್ಧಿ ಆಗಬೇಕೆಂದು ಚಿಂತನೆ ಮಾಡುತ್ತಿಲ್ಲ; ಅನುದಾನವನ್ನೂ ಕೊಡುತ್ತಿಲ್ಲ. ಕೇವಲ ಚುನಾವಣೆ ಬಂದಾಗ ಭಾಷಣ ಮಾಡುವುದಕ್ಕಷ್ಟೇ ಸೀಮಿತರಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಯಾರಿಗೂ ಹೇಳಲು ಹೋಗದಿರಿ..
ಮನೆಮುರುಕರಿದ್ದಾರೆ ಎಂದು ಸಿದ್ದರಾಮಯ್ಯನವರು ಹೇಳಿದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಅವರು, ಯಾರಿಗೂ ಹೇಳಲು ಹೋಗದಿರಿ; ಅದು ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಹೇಳಿದ್ದಾರೆ. ಎಲ್ಲೂ ಮಾತನಾಡಲು ಹೋಗದಿರಿ ಎಂದು ತಿಳಿಸಿದರು.
ಕುರ್ಚಿ ಅಲ್ಲಾಡಿಸುವ ಕೆಲಸ ನಡೆಯುತ್ತಿದೆ ಎಂಬ ಸಿಎಂ ಹೇಳಿಕೆ ಕುರಿತು ಗಮನ ಸೆಳೆದಾಗ, ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಯಾರ್ಯಾರು ನಾನೂ ಮುಖ್ಯಮಂತ್ರಿ ಆಕಾಂಕ್ಷಿ, ನಾನೂ ಸೀನಿಯರ್, ನಾನೂ ಜೂನಿಯರ್ ಇದ್ದೇನೆ ಎಂದು ಹೇಳಿಕೆ ಕೊಡುತ್ತಿದ್ದಾರೋ ಅವರಿಗೆ ತಾವು ಈ ಪ್ರಶ್ನೆ ಕೇಳಿ ಎಂದು ಸಲಹೆ ನೀಡಿದರು.

ಪ್ಯಾಲೆಸ್ಟೀನ್ ಧ್ವಜ ಹಾಕಿದ್ದಷ್ಟೇ ಅಲ್ಲ; ಮೊನ್ನೆ ನಾಗಮಂಗಲದಲ್ಲಿ ಆಗಿರುವ ಘಟನೆ, ದೇಶದ್ರೋಹಿಗಳ ಅಟ್ಟಹಾಸ, ಪಾಂಡವಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯಕ್ಕೆ ಪೊಲೀಸರು ನುಗ್ಗಿರುವುದು, ದಾವಣಗೆರೆಯಲ್ಲಿ ನಡೆದ ಘಟನೆ, ಬೆಂಗಳೂರಿನ ರಾಮೇಶ್ವರಂ ಕೆಫೆಯ ಬಾಂಬ್ ಸ್ಫೋಟ ಗಮನಿಸಿದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ್ರೋಹಿ ಚಟುವಟಿಕೆಗಳಿಗೆ ಹೆಚ್ಚು ಶಕ್ತಿ ಸಿಗುತ್ತಿದೆ ಎಂಬ ಭಾವನೆ ಎಲ್ಲರಲ್ಲೂ ಮೂಡಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷವೇ ಬೆಂಕಿ ಹಚ್ಚುವುದು- ಹಚ್ಚಿಸಿಕೊಳ್ಳುವ ಕೆಲಸ ಮಾಡುತ್ತಿದೆ. ನಾಗಮಂಗಲದಲ್ಲಿ ಕೆಲವು ಅಲ್ಪಸಂಖ್ಯಾತ ಗೂಂಡಾಗಳು ಹಿಂದೂಗಳ ಅಂಗಡಿಗಳಿಗೆ ನುಗ್ಗಿ ಬೆಂಕಿ ಹಚ್ಚುವ ಸಂದರ್ಭದಲ್ಲಿ ಅಲ್ಲಿರುವ ಪೊಲೀಸರು ಕೈಕಟ್ಟಿ ಕುಳಿತಿದ್ದರು ಎಂದರೆ, ಯಾರು ಇದಕ್ಕೆ ಹೊಣೆಗಾರರು? ಗೃಹ ಸಚಿವರು ಯಾವುದೋ ಒಂದು ಸಣ್ಣ ಘಟನೆ ಎನ್ನುತ್ತಾರೆ. ರಾಜ್ಯ ಸರಕಾರದ ನಡವಳಿಕೆಯ ಹಿಂದೆ ಕಾನೂನು- ಸುವ್ಯವಸ್ಥೆ ಹದಗೆಡಿಸುವ ಹುನ್ನಾರ ಅಡಗಿದೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.

ಸದಸ್ಯತ್ವ ಅಭಿಯಾನ ಇನ್ನಷ್ಟು ಚುರುಕು
ವಾಲ್ಮೀಕಿ ನಿಗಮದ ಹಗರಣ ಸಂಬಂಧ ಪಾದಯಾತ್ರೆ ಕುರಿತ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಎಲ್ಲವೂ ದೆಹಲಿಯಲ್ಲಿ ಚರ್ಚೆಯ ಹಂತದಲ್ಲಿದೆ ಎಂದರು. ರಾಜ್ಯದಲ್ಲಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸುವ ಗುರಿ ನಮ್ಮ ಮುಂದಿದೆ. ಅದನ್ನು ಇನ್ನೂ ಚುರುಕುಗೊಳಿಸಬೇಕಿದೆ. ಮುಂದಿನ ಸುಮಾರು ಒಂದೂವರೆ ತಿಂಗಳ ಕಾಲ ಸದಸ್ಯತ್ವ ಅಭಿಯಾನದಲ್ಲಿ ನಮ್ಮ ಕಾರ್ಯಕರ್ತರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂದು ವಿವರಿಸಿದರು.

ರಮೇಶ್ ಜಾರಕಿಹೊಳಿ ಅವರು ಬಿಜೆಪಿ ನಾಯಕರಾಗಿ ತಮ್ಮನ್ನು (ವಿಜಯೇಂದ್ರನನ್ನು) ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ. ಇದನ್ನು ಸ್ವಾಗತ ಮಾಡುತ್ತೇನೆ. ನಾನು ನಾಯಕ ಎಂದು ಹೊರಟಿಲ್ಲ; ನಮ್ಮ ಪಕ್ಷದ ವರಿಷ್ಠರು, ಹಿರಿಯರು ನನ್ನನ್ನು ರಾಜ್ಯಾಧ್ಯಕ್ಷನಾಗಿ ನೇಮಕ ಮಾಡಿದ್ದಾರೆ. ರಾಜ್ಯಾಧ್ಯಕ್ಷನಾಗಿ, ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಒಂಟಿಗಾಲಿನಲ್ಲಿ ನಿಲ್ಲಿಸುವ ಕೆಲಸವನ್ನು ಬೆಂಗಳೂರು- ಮೈಸೂರು ಪಾದಯಾತ್ರೆ ಮೂಲಕ ಯಶಸ್ವಿಯಾಗಿ ಮಾಡಿದ್ದೇವೆ ಎಂದರು. ರಮೇಶ್ ಜಾರಕಿಹೊಳಿ ಅವರ ಬಾಯಲ್ಲಿ ಪಕ್ಷ, ಪಕ್ಷದ ಸಿದ್ಧಾಂತದ ವಿಚಾರ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.

ಶಿಕಾರಿಪುರದ ಗೆಲುವು ಕಾಂಗ್ರೆಸ್ ಕೊಡುಗೆ ಎಂಬ ಡಿ.ಕೆ.ಶಿವಕುಮಾರರ ಹೇಳಿಕೆಗೆ ತಿರುಗೇಟು ನೀಡಿಲ್ಲ ಎಂದು ಯತ್ನಾಳ್ ಅವರ ಹೇಳಿಕೆ ಕುರಿತು ಪತ್ರಕರ್ತರು ಗಮನ ಸೆಳೆದರು. ತಂದೆಯವರಾದ ಯಡಿಯೂರಪ್ಪನವರು ಒಂದು ಮಾತನ್ನು ಹೇಳುತ್ತಿರುತ್ತಾರೆ. ಮಾತನಾಡುವುದೇ ಸಾಧನೆ ಆಗಬಾರದು; ಸಾಧನೆ ಮಾತನಾಡಬೇಕು ಎಂಬುದು ಅವರ ಕಿವಿಮಾತು. ಬೆಂಗಳೂರು ಇವರದೇ ಸಾಮ್ರಾಜ್ಯ ಎಂದು ಮೆರೆಯುತ್ತಿದ್ದರು. ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದೇವೆ. ನಾನು ಮಾತನಾಡುವ ವ್ಯಕ್ತಿಯಲ್ಲ; ಕೆಲಸ ಮಾಡಿ ತೋರಿಸುವವ ಎಂದು ನುಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ