ಬೆಂಗಳೂರು: ಮುಡಾ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ವಿಪಕ್ಷ ಬಿಜೆಪಿ ಆಗ್ರಹಿಸುತ್ತಿದ್ದರೆ ಇತ್ತ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಪ್ರಶ್ನೆಗೆ ಸರಿಯಾಗಿ ಉತ್ತರಿಸದೇ ನುಣುಚಿಕೊಂಡಿದ್ದಾರೆ.
ಮುಡಾ ಸೈಟು ಹಂಚಿಕೆ ವಿಚಾರದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಸಿಎಂ ಪತ್ನಿ ಪಾರ್ವತಿ ಹೆಸರೂ ಕೇಳಿಬಂದಿದೆ. ಈ ಬಗ್ಗೆ ವಿಪಕ್ಷ ಬಿಜೆಪಿ ಸಿಬಿಐ ತನಿಖೆಗೆ ಒತ್ತಾಯಿಸಿ ಕಳೆದ ಎರಡು ದಿನಗಳಿಂದ ಪ್ರತಿಭಟನೆ ಮಾಡುತ್ತಲೇ ಇದೆ. ಆದರೆ ನಿನ್ನೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಎಂ ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದಿದ್ದರು.
ಇಂದೂ ಕೂಡಾ ಸಿಎಂ ಬಳಿ ಮಾಧ್ಯಮಗಳು ಪ್ರಕರಣವನ್ನು ಸಿಬಿಐಗೆ ವಹಿಸುತ್ತೀರಾ ಎಂದು ಪ್ರಶ್ನಿಸಿವೆ. ಇನ್ನು, ಮುಡಾ ಬಗ್ಗೆ ಮಾಧ್ಯಮಗಳು ಪ್ರಶ್ನಿಸುತ್ತಲೇ ಮೈಕ್ ಬಳಿಯೂ ಬರದೇ ದೂರದಿಂದಲೇ ಮಾತನಾಡುತ್ತಾ ಸಿಎಂ ನಿರ್ಗಮಿಸಿದ್ದಾರೆ. ಮತ್ತೊಮ್ಮೆ ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದಿದ್ದಾರೆ.
ನಾವು ಇದುವರೆಗೆ ಏಳು ಪ್ರಕರಣವನ್ನು ಸಿಬಿಐಗೆ ವಹಿಸಿದ್ದೇವೆ. ಆದರೆ ಬಿಜೆಪಿ ಅಧಿಕಾರದಲ್ಲಿದ್ದಾಗ ನಾವು ಹಲವು ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಕೇಳಿದ್ದರೂ ಕೊಟ್ಟಿರಲಿಲ್ಲ. ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವ ಅವಶ್ಯಕತೆಯಿಲ್ಲ ಎಂದು ದೂರದಿಂದಲೇ ಹೇಳಿ ತೆರಳಿದ್ದಾರೆ. ಈ ಮೂಲಕ ಅವರು ಕೊಟ್ಟಿಲ್ಲ ಹಾಗಾಗಿ ನಾವೂ ಕೊಡಲ್ಲ ಎನ್ನುವ ಧೋರಣೆ ಪ್ರದರ್ಶಿಸಿದ್ದಾರೆ.