ಮೇಕೆದಾಟು ಅಣೆಕಟ್ಟು: ನಮಗಿಂತ ತಮಿಳುನಾಡಿಗೆ ಹೆಚ್ಚು ಅನುಕೂಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Krishnaveni K

ಸೋಮವಾರ, 29 ಜುಲೈ 2024 (20:22 IST)
ಮಂಡ್ಯ: ಕಾವೇರಿಗೆ ವಿವಾದ ನಾಲ್ಕು ರಾಜ್ಯಗಳಿಗೆ ಅಂದರೆ ತಮಿಳುನಾಡು, ಕರ್ನಾಟಕ, ಕೇರಳ, ಪಾಂಡಿಚೆರಿ ರಾಜ್ಯಗಳಿಗೆ ಸಂಬಂಧಿಸಿದೆ ತಮಿಳುನಾಡಿನವರು ರಾಜಕೀಯ ಲಾಭಕ್ಕಾಗಿ ಕ್ಯಾತೆ ಮೇಕೆದಾಟು ಯೋಜನೆಯ ಕುರಿತು ತೆಗೆಯುತ್ತಲೇ ಇರುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಕಾವೇರಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ನಂತರ  ಕಾರ್ಯಕ್ರಮವನ್ನು  ಉದ್ದೇಶಿಸಿ ಮಾತನಾಡಿದರು

ಈ ವಿವಾದ ಸರ್ವೋಚ್ಛ ನ್ಯಾಯಾಲಯದಲ್ಲಿ ತೀರ್ಮಾನವಾಗಿದ್ದು ಸಾಧಾರಣ ವರ್ಷದಲ್ಲಿ ಜಲಾಶಯಗಳು ತುಂಬಿದ  ಸಂದರ್ಭದಲ್ಲಿ 177.25 ಟಿಎಂಸಿ ನೀರನ್ನು ಕೊಡಬೇಕೆಂದಿದೆ. 2022-2023ರಲ್ಲಿ ಸುಮಾರು 665 ಟಿಎಂಸಿ ನೀರು ಹರಿದಿದೆ. ಈ ವರ್ಷವೂ ಕೂಡ ಹೆಚ್ಚು ಹೋಗುವ ಸಾಧ್ಯತೆಯಿದೆ. ಈಗಾಗಲೇ 83. ಟಿಎಂಸಿ ಗೂ ಹೆಚ್ಚು ನೀರು ತಮಿಳುನಾಡಿಗೆ ಹರಿದು ಹೋಗಿದೆ. ಸಂಕಷ್ಟದ ವರ್ಷದಲ್ಲಿ ಅಷ್ಟು ನೀರನ್ನು ಕೊಡಲು ಸಾಧ್ಯವಿಲ್ಲ. ಈ ವರ್ಷ ಹೆಚ್ಚು ನೀರನ್ನು ಕೊಡಲಾಗುವುದು. ಸಮುದ್ರಕ್ಕೆ ಸೇರುವ ಹೆಚ್ಚುವರಿ ನೀರನ್ನು ತಡೆಹಿಡಿಯಲು ಬ್ಯಾಲೆಂನ್ಸಿಂಗ್ ರಿಸರ್ವಾಯರ್ ಕಟ್ಟಿದರೆ ನಮಗಿಂತ ಜಾಸ್ತಿ ತಮಿಳುನಾಡಿಗೆ ಅನುಕೂಲವಾಗುತ್ತದೆ ಎಂದರು.
 
ಕೇಂದ್ರದಿಂದ ಮಂಜೂರಾತಿ ಕೊಡಿಸಲು ಒತ್ತಾಯಿಸಬೇಕು
 
ಕೇಂದ್ರ ಸರ್ಕಾರ ಈ ಯೋಜನೆಗೆ ಮಂಜೂರಾತಿಯನ್ನು ಕೊಟ್ಟಿಲ್ಲ. ಮಂಜೂರಾತಿ ಕೊಡಿ ಎಂದರೆ ವಿರೋಧ ಪಕ್ಷದವರು ಇದನ್ನು ವಿರೋಧಿಸುತ್ತಾರೆ. ಮಂಡ್ಯ ಲೋಕಸಭಾ ಸದಸ್ಯರು ಇದಕ್ಕೆ ಒಪ್ಪಿಗೆ ಕೊಡಿಸುವ ಕೆಲಸ ಮಾಡಿದರೆ ಸುಮಾರು 65 ಟಿಎಂಸಿ ನೀರನ್ನು ಹಿಡಿದಿಡಲು ಹಾಗೂ ವಿದ್ಯುತ್ ಉತ್ಪಾಸದಿಲು ಸಾಧ್ಯವಾಗಲಿದೆ. ಬೆಂಗಳೂರಿಗೆ ಕುಡಿಯುವ ನೀರು ಹಾಗೂ ನೀರು  ಹಿಡಿದಿರುವುದರಿಂದ ಮಳೆ ಬಾರದೇ ಜಲಾಶಯಗಳು ತುಂಬದೇ ಹೋದ ಸಂದರ್ಭಗಳಲ್ಲಿ ತಮಿಳುನಾಡಿಗೆ ನೀರು ಕೊಡಲೂ ಸಾಧ್ಯವಾಗಲಿದೆ.  ನಾವು ಈ ಬಗ್ಗೆ ಪಾದಯಾತ್ರೆಯನ್ನೂ ಮಾಡಿದ್ದೇವೆ. ನಮ್ಮ ಮೇಲೆ ಪ್ರಕರಣವನ್ನೂ ದಾಖಲಿಸಿದ್ದಾರೆ. ಮಳೆ ಸರಿಯಾಗಿ ಆದಾಗ ಮಾತ್ರ ತಮಿಳುನಾಡು 177.25 ನೀರನ್ನು ಪಡೆಯಲು ಅರ್ಹರು. ಕೊರತೆಯಾದರೆ ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ. ಇದು ನಮ್ಮ ಹಕ್ಕು. ಇದನ್ನು ನ್ಯಾಯಮಂಡಲಿ ಹಾಗೂ ಸರ್ವೋಚ್ಛ ನ್ಯಾಯಾಲಯವೂ ಹೇಳಿದೆ. ಇದಕ್ಕೆ ತಮಿಳುನಾಡು ಅನಗತ್ಯವಾಗಿ ತಕರಾರು ಮಾಡುತ್ತಿದ್ದಾರೆ. ಇದರ ಬಗ್ಗೆ ಕರ್ನಾಟಕದ ಲೋಕಸಭಾ ಸದಸ್ಯರು ಒಂದು ದಿನವೂ ಮಾತನಾಡುವುದಿಲ್ಲ. ಆಗಿರುವ ಅನ್ಯಾಯವನ್ನು ಬಿಟ್ಟು ಕೆಲಸಕ್ಕೆ ಬಾರದ ವಿಚಾರಗಳನ್ನು ಮಾತನಾಡುತ್ತಾರೆ ಎಂದರು.
 
ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ
 
ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಒಂದು ರೂಪಾಯಿಯನ್ನು ಕೊಟ್ಟಿಲ್ಲ. ಏನೂ ಅನ್ಯಾಯವಾಗಿಲ್ಲ ಎಂದು ಜನರಿಗೆ ತಪ್ಪು ಮಾಹಿತಿ, ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. 10 ದಿನ ನಡೆಯುವ ವಿಧಾನಮಂಡಲದ ಅಧಿವೇಶನದಲ್ಲಿ 8 ದಿನ ಕಾಲಹರಣ ಮಾಡಿದರು. ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದಂತೆ ಪ್ರವಾಹ, ಕೃಷಿ, ನೀರಾವರಿ, ಮೇಕೆದಾಟು, ಮಹದಾಯಿ, ಕೃಷ್ಣಾ, ರಾಜ್ಯಕ್ಕೆ ಬರಬೇಕಾದ ಅನುದಾನಗಳ ಬಗ್ಗೆ ಒಂದು ದಿನವೂ ಮಾತನಾಡಲಿಲ್ಲ. ರಾಜ್ಯಕ್ಕೆ ಸಂಬಂಧಧವಿಲ್ಲದ ಸುಳ್ಳು ಹೇಳಿಕೊಂಡು  ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ರಾಜ್ಯದ ಜನ ರಾಜಕೀಯವಾಗಿ ಪ್ರಬುದ್ಧರಾಗಿದ್ದು, ಯಾರು ಸುಳ್ಳು ಹೇಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳುವ ಶಕ್ತಿ ಅವರಿಗಿದೆ. ಕಾಂಗ್ರೆಸ್ ಸರ್ಕಾರ ಜನರ ಆಶೀರ್ವಾದಿಂದ 136 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದಿದೆ. ನಮಗೆ ಜನ ಆಶೀರ್ವಾದ ಮಾಡಿದ್ದಾರೆ. ನಮ್ಮ ಸರ್ಕಾರವನ್ನು ದುರ್ಬಲಗೊಳಿಸಲು ಕ್ಷುಲ್ಲಕ ವಿಚಾರಗಳನ್ನು ಇಟ್ಟುಕೊಂಡು, ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ದೇಶದ ಅನೇಕ ರಾಜ್ಯಗಳಲ್ಲಿ ಮಾಡಿದಂತೆ ಇಲ್ಲಿಯೂ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಜನರು ಸುಳ್ಳಿಗೆ ಮಾರು ಹೋಗುವುದಿಲ್ಲ ಎಂದು ನಂಬಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
 
ದಲಿತರಿಗೆ ನಾವು ಮಾಡಿರುವಷ್ಟು ಕೆಲಸವನ್ನು ಬೇರೆ ಯಾವ ಸರ್ಕಾರವೂ ಮಾಡಿಲ್ಲ
 
ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲ ಎನ್ನುತ್ತಾರೆ. ಯಾವ ಅಭಿವೃದ್ಧಿ ಕೆಲಸ ನಿಂತು ಹೋಗಿದೆ? ಎಂದು ಪ್ರಶ್ನಿಸಿ ಮುಖ್ಯಮಂತ್ರಿಗಳು ಗ್ಯಾರಂಟಿಗಳನ್ನು ಜಾರಿ ಮಾಡಿ 4.50 ಕೋಟಿ ಜನರಿಗೆ 4-5 ಸಾವಿರ ತಿಂಗಳಿಗೆ ದೊರಕುವ ರೀತಿ ಮಾಡಲಾಗಿದೆ. ಇದರಿಂದ ಬಡವರಿಗೆ ಅನುಕೂಲವಾಗುವುದಿಲ್ಲವೇ? ಬಿಜೆಪಿ/ ಜೆಡಿಎಸ್ ನವರಿಗೆ ತಾಕತ್ತಿದ್ದರೆ ಬಡವರ ವಿರುದ್ಧವಾಗಿ ಹೇಳಿಕೆಯನ್ನು ನೀಡಲಿ. ಇವರಿಗೆ  ಧಮ್ ಇಲ್ಲ. ಗ್ಯಾರಂಟಿಗಳನ್ನು ನಿಲ್ಲಿಸಲಿ ಎಂದು ಹೇಳಲಿ ನೋಡೋಣ. ಹಾಗೆಂದು ಹೇಳಿದರೆ ಬಡವರು ವಿರೋಧಿಸುತ್ತಾರೆಂಬ ಭಯ. ಈ ವರ್ಷದ ಬಜೆಟ್ 3,71,000 ಕೋಟಿ ರೂ.ಗಳು. ಯಾವ ಇಲಾಖೆಗೆ ಅನುದಾನ ಕೊಟ್ಟಿಲ್ಲ ನಾವು? ಎಂದು ಪ್ರಶ್ನಿಸಿದರು. ನಾವು ದಲಿತರಿಗೆ ಮಾಡಿರುವಷ್ಟು ಕೆಲಸವನ್ನು ಬೇರೆ ಯಾವ ಸರ್ಕಾರವೂ ಮಾಡಿಲ್ಲ. ಬಿಜೆಪಿಯವರು ರೈತ ವಿರೋಧಿಗಳು. ಅವರು ನಮಗೆ ಪಾಠ ಹೇಳಿಕೊಡುವ ಕೆಲಸ ಮಾಡುತ್ತಾರೆ ಎಂದರು.
 
ದಲಿತರ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇದೆಯೇ
 
ಎಸ್.ಸಿ.ಎಸ್.ಪಿ/ ಟಿಎಸ್‌ಪಿ  ಯೋಜನೆ ನಮ್ಮ ಸರ್ಕಾರ ಬಿಟ್ಟರೆ ಬಿಜೆಪಿ ಆಡಳಿತವಿರುವ ಬೇರೆ ಯಾವ ರಾಜ್ಯಗಳಲ್ಲಿದೆ ಎಂದು ರಾಜ್ಯದ ಬಿಜೆಪಿ ನಾಯಕರಾದ ಆರ್. ಅಶೋಕ್, ವಿಜಯೇಂದ್ರ ಅವರನ್ನು ಕೇಳಬಯಸುತ್ತೇನೆ ಎಂದರು. ಎಸ್.ಸಿ.ಎಸ್.ಪಿ/ ಟಿಎಸ್‌ಪಿ ಕಾಯ್ದೆಯಡಿ 24%  ದಲಿತರಿಗೆ 39,121 ಕೋಟಿಯನ್ನು ರಾಜ್ಯ ಸರ್ಕಾರ ವೆಚ್ಚ ಮಾಡುತ್ತಿದೆ. ಕೇಂದ್ರ ಸರ್ಕಾರ 48 ಲಕ್ಷ ಕೋಟಿ ಬಜೆಟ್ ನಲ್ಲಿ 65 ಸಾವಿರ ಕೋಟಿ ರೂ.ಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಮೀಸಲಿಟ್ಟದಿದ್ದಾರೆ. ದಲಿತರ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಬಿಜೆಪಿಗೆ ಹಿಂದುಳಿದವರು,  ಅಲ್ಪಸಂಖ್ಯಾತರ  ಬಗ್ಗೆ ಮಾತನಾಡಲು ನೈತಿಕತೆ ಇದೆಯೇ? ಸಾಮಾಜಿಕ ನ್ಯಾಯದ ವಿರುದ್ಧವಾಗಿರುವ ಬಿಜೆಪಿ, ಸಮ ಸಮಾಜ ಆಗಬಾರದು ಎಂದು ನಂಬಿದೆ ಎಂದರು. ಬಸವಣ್ಣ, ಅಂಬೇಡ್ಕರ್, ಗಾಂಧೀಜಿ ಅವರ ವಿಚಾರಗಳಿಗೆ ವಿರುದ್ಧವಾಗಿರುವ ಬಿಜೆಪಿಯಿಂದ ನಾವು ಪಾಠ ಕಲಿಯಬೇಕಾದ ಅಗತ್ಯವಿಲ್ಲ. ಈ ರಾಜ್ಯದ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ. ಎಲ್ಲಾ ಜಾತಿ, ಧರ್ಮದ ಬಡವರಿಗೆ ಆರ್ಥಿಕ ಶಕ್ತಿ ತುಂಬುವ ಪ್ರಯತ್ನವನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಮಾಡುತ್ತಿದೆ ಎಂದರು.
 
ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಬಿಜೆಪಿಯದ್ದು
 
ಸುಳ್ಳನ್ನು ನೂರು ಸಾರಿ ಹೇಳಿ ಸತ್ಯ ಮಾಡಬೇಕೆಂಬ ಉದ್ದೇಶ ಇವರದ್ದು. ನಾವೆಷ್ಟೇ ಪರಿಹಾರ ನೀಡುವ ಪ್ರಯತ್ನ ಮಾಡಿದರೂ ಕೂಡ ಮಳೆ ಬಂದು ಬೆಳೆ ಬೆಳೆದಾಗ ಮಾತ್ರ ಸಮೃದ್ಧಿಯಾಗಲು ಸಾಧ್ಯ. ಬಿಜೆಪಿ, ಜೆಡಿಎಸ್ ಮಾತುಗಳನ್ನು ಕೇಳಿ ನಮ್ಮ ಮೇಲೆ ಅನುಮಾನ ಪಟ್ಟುಕೊಳ್ಳುವ ಕೆಲಸವನ್ನು ಮಾಡಬೇಡಿ ಎಂದರು. ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಅವರದ್ದು. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ 121 ಇಡಿ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 115 ಪ್ರಕರಣಗಳು ವಿರೋಧ ಪಕ್ಷದವರ ಮೇಲೆ ಹಾಕಿದ್ದಾರೆ. ವಿರೋಧ ಪಕ್ಷದವರನ್ನು ದುರ್ಬಲಗೊಳಿಸಿ, ಶಕ್ತಿಗುಂದಿಸಿ ಅಧಿಕಾರ ಮಾಡುವುದು, ಜೈಲಿಗೆ ಕಳಿಸುವುದು ಮಾಡುತ್ತಿದ್ದಾರೆ. ಜನ ಇದನ್ನು ಖಂಡಿಸಬೇಕು. ಜನರು ಏನು ಅನಿಸಿಕೆಗಳನ್ನು ಇಟ್ಟುಕೊಂಡು ನಮಗೆ ಆಶೀರ್ವಾದ ಮಾಡಿದ್ದಾರೆ ಅದನ್ನು ಈಡೇರಿಸುವ ಪ್ರಯತ್ನ ನಮ್ಮದು. ಬಿಜೆಪಿ/ಜೆಡಿಎಸ್ ನವರು ಮನೆ ಮುರುಕರು. ಪ್ರಸ್ತುತ ಅವರಿಬ್ಬರು ಒಂದಾಗಿದ್ದು, ಎಲ್ಲಾ ಪ್ರಕರಣಗಳನ್ನು ಸಿ.ಬಿ.ಐ.ಗೆ ಕೊಡಲು ಒತ್ತಾಯಿಸುತಾರೆ. ಅದೇ ಅವರು ಅಧಿಕಾರದಲ್ಲಿದ್ದಾಗ ಸಿಬಿಐ ಯನ್ನು ಚೋರ್ ಬಚಾವ್ ಸಂಸ್ಥೆ ಎಂದು ಕರೆದಿದ್ದರು. ಈಗ  ಸಿಬಿಐ ಮೇಲೆ ಇದ್ದಕ್ಕಿದ್ದಂತೆ ಬಿಜೆಪಿಗೆ ಪ್ರೀತಿ ಹುಟ್ಟಿದೆ. ತನಿಖೆಗೆ ನಾವು ಹೆದರುವುದಿಲ್ಲ, ಏಕೆಂದರೆ ಯಾವ ಅಪರಾಧವನ್ನೂ ಮಾಡಿಲ್ಲ. ಆದರೆ ಕಾನೂನಿನ ಪ್ರಕಾರ ತನಿಖೆಯಾಗಬೇಕು. ಸಂವಿಧಾನ, ಕಾನೂನಿನ ವಿರುದ್ಧವಾಗಿ ಆಗುವ ತನಿಖೆಗಳನ್ನು ನಾವು  ಖಂಡಿಸುತ್ತೇವೆ ಎಂದರು.
 
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೃಷಿ ಹಾಗೂ ಮಂಡ್ಯ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ: ಹೆಚ್.ಸಿ.ಮಹದೇವಪ್ಪ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್, ಶಾಸಕ ರಮೇಶ್ ಬಂಡಿಸಿದ್ದೇಗೌಡ ಮೊದಲಾದವರು ಉಪಸ್ಥಿತರಿದ್ದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ