ನೇಹಾ ಹಿರೇಮಠ್ ಕೊಲೆ ಪ್ರಕರಣ ಸಿಒಡಿ ತನಿಖೆಗೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Krishnaveni K

ಸೋಮವಾರ, 22 ಏಪ್ರಿಲ್ 2024 (14:23 IST)
ಶಿವಮೊಗ್ಗ : ಹುಬ್ಬಳ್ಳಿ ನೇಹಾ ಹಿರೇಮಠ್ ಕೊಲೆ  ಪ್ರಕರಣವನ್ನು ಸಿ.ಒ.ಡಿ ತನಿಖೆಗೆ ವಹಿಸಲಾಗುವುದು. ವಿಶೇಷ ನ್ಯಾಯಾಲಯ ಸ್ಥಾಪಿಸಿ   ಕಾಲಮಿತಿಯಲ್ಲಿ  ವಿಚಾರಣೆ  ನಡೆಸಲಾಗುವುದು ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ತಿಳಿಸಿದರು.
 
 
ಅವರು ಇಂದು  ಶಿವಮೊಗ್ಗ  ವಿಮಾನನಿಲ್ದಾಣದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿಗಳು ಹುಬ್ಬಳ್ಳಿಯಲ್ಲಿ ನೇಹಾ ಮನೆಗೆ ಭೇಟಿ ನೀಡಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ನಮ್ಮ ಸಚಿವರು, ಕಾರ್ಯಕರ್ತರು ಹಾಗೂ ಸಚಿವ ಹೆಚ್. ಕೆ.ಪಾಟೀಲ್ ಭೇಟಿ ನೀಡಿದ್ದಾರೆ. ಧಾರವಾಡಕ್ಕೆ ತೆರಳಿದ ಸಂದರ್ಭದಲ್ಲಿ ಭೇಟಿ ನೀಡುವುದಾಗಿ ಹೇಳಿದರು.
 
ದಿಂಗಾಲೇಶ್ವರ ಸ್ವಾಮಿಗಳ ಉಮೇದುವಾರಿಕೆ  ಹಿಂಪಡೆದು ಕಾಂಗ್ರೆಸ್ ಬೆಂಬಲಿಸಲು ಮನವಿ
ಜಾತ್ಯಾತೀತ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಅವರ ಉಮೇದುವಾರಿಕೆಯನ್ನು ಹಿಂಪಡೆದು ಜಾತ್ಯಾತೀತ ಪಕ್ಷ ಕಾಂಗ್ರೆಸ್ ನ್ನು ಬೆಂಬಲಿಸಬೇಕೆಂದು ಅವರಲ್ಲಿ ಮನವಿ ಮಾಡಿದ್ದೇನೆ. ಅವರ ಮಠ ಜಾತ್ಯಾತೀತವಾಗಿದ್ದು ಅವರ ಬೆಂಬಲ ಅಗತ್ಯವಿದೆ ಎಂದರು.
 
 ಕುಡಿಯುವ ನೀರು  ಹಾಗೂ ಮೇವಿಗೆ ತೊಂದರೆಯಾಗದಂತೆ ಕ್ರಮ
 
ಬರ ಪರಿಹಾರ ನೀಡಿಲ್ಲದ್ದರ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೊರೆ ಹೊದಿದ್ದೇವೆ. ಪ್ರಕೃತಿ ವಿಕೋಪ ನಿರ್ವಹಣೆ ಕಾಯ್ದೆ ಪ್ರಕಾರ ಕೇಂದ್ರ ತಂಡ ವರದಿ ನೀಡಿದ ಒಂದು ತಿಂಗಳೊಳಗೆ ಇತ್ಯರ್ಥ ಮಾಡಬೇಕು. ಅಕ್ಟೋಬರ್ ತಿಂಗಳಲ್ಲಿ ವರದಿ ಸಲ್ಲಿಸಲಾಗಿದ್ದು ಆರು ತಿಂಗಳಾದರೂ  ಇಲ್ಲಿಯವರೆಗೆ ಪರಿಹಾರ ನೀಡಿಲ್ಲ. ನಾನೇ ಖುದ್ದು ಪ್ರಧಾನಿ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇನೆ. ಡಿಸೆಂಬರ್ 23 ಕ್ಕೆ  ಸಭೆ ಕರೆದು ಇತ್ಯರ್ಥ ಮಾಡುವುದಾಗಿ ಹೇಳಿದ್ದರು. ರಾಜ್ಯದಿಂದ  ರೈತರಿಗೆ 2000 ರೂ.ಗಳವರೆಗೆ ಪರಿಹಾರ  ನೀಡಿದ್ದೇವೆ. 34 ಲಕ್ಷ ರೈತರಿಗೆ 650 ಕೋಟಿ ರೂಪಾಯಿಗಳ ನ್ನು ಬಿಡುಗಡೆ ಮಾಡಿದ್ದೇವೆ. ಕುಡಿಯುವ ನೀರು, ಮೇವು, ಎನ್.ಆರ್. ಇ.ಜಿ.ಎಸ್. ಅಡಿಯಲ್ಲಿ ಕೆಲಸ ಮಾಡಿಸುತ್ತಿದ್ದು, ಮೇವಿಗೆ ಹಾಗೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದರು.
 
ದೇಶದ  ಪ್ರಧಾನ ಮಂತ್ರಿಯಾಗಿ ಎಲ್ಲಾ ಜನಾಂಗವನ್ನು ಸಮಾನವಾಗಿ ಕಾಣಬೇಕು
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾನ ಆಸ್ತಿ ಹಂಚಿಕೆ ಮಾಡುತ್ತಾರೆ, ಮಹಿಳೆಯರ ಮಾಂಗಲ್ಯವನ್ನು ಮುಸ್ಲಿಂ ಮರಿಗೆ ಕೊಡುತ್ತಾರೆ ಎಂದು ಪ್ರಧಾನಮಂತ್ರಿ ಆರೋಪ ಮಾಡಿರುವ ಬಗ್ಗೆ ಮಾತನಾಡಿ ಪ್ರಧಾನಿಯಾಗಿ ಅವರು ಇಷ್ಟು ಕೆಳಮಟ್ಟದಲ್ಲಿ ಮಾತನಾಡ ಬಾರದಿತ್ತು.  ಹಿಂದೂಗಳ ಮಂಗಳಸೂತ್ರವನ್ನು  ತೆಗೆದು ಮುಸ್ಲಿಮರಿಗೆ ನೀಡುತ್ತಾರೆ  ಎನ್ನುವುದು ಅವರ ಸ್ಥಾನಕ್ಕೆ ಅಗೌರವ ತರುವಂಥ ಮಾತುಗಳು. ದೇಶದ  ಪ್ರಧಾನ ಮಂತ್ರಿಯಾಗಿ ಎಲ್ಲಾ ಜನಾಂಗವನ್ನು ಸಮಾನವಾಗಿ ನೋಡಿಕೊಳ್ಳುವ ಕರ್ತವ್ಯ ಅವರದ್ದು. ಇಂಥ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ ಎಂದರು.
 
ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಲ್ಲಿ ನಂಬಿಕೆ
 ಸಮಾನವಾಗಿ ಆಸ್ತಿ ಹಂಚಿಕೆಯಾಗುವುದು ಸಾಮಾಜಿಕ ನ್ಯಾಯ,  ಸಮಸಮಾಜ ನಿರ್ಮಾಣವಾಗಬೇಕಾದರೆ ಎಲ್ಲಾರೂ ಮುಖ್ಯವಾಹಿನಿಗೆ ಬರಬೇಕು. ಕೆಲವೇ ಜನರ ಕೈಯಲ್ಲಿ ಅಧಿಕಾರ, ಸಂಪತ್ತು ಇದ್ದರೆ ಇದು ಆಗುವುದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಅಸಮಾನತೆ ಹೋಗಬೇಕಾದರೆ ಅಧಿಕಾರ ಮತ್ತು ಸಂಪತ್ತು ಕೆಲವರ ಕೈಯಲ್ಲಿ ಇರಬಾರದು, ಹಂಚಿಕೆಯಾಗಬೇಕೆಂದು ಹೇಳಿದ್ದಾರೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಲ್ಲಿ ನಮಗೆ ನಂಬಿಕೆ ಇದೆ ಎಂದರು.
 
ಪ್ರಧಾನಿಗಳು ಹೇಳಿದಂತೆ ನಡೆದುಕೊಂಡಿಲ್ಲ
 
ಬಿಜೆಪಿ ಕಳಸವಿದ್ದಂತೆ ಕಾಂಗ್ರೆಸ್ ಕಪ್ಪು ನೀಡುತ್ತದೆ ಎಂದು ಬಿಜೆಪಿ ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ದೇಶದ ಪ್ರಧಾನಮಂತ್ರಿ ಇಂದಿನವರೆಗೆ ಹೇಳಿರುವುದನ್ನು ಅನುಷ್ಠಾನಕ್ಕೆ ತಂದಿಲ್ಲ. ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ,  15 ಮೇ ಹಣಕಾಸು ಆಯೋಗದ ಶಿಫಾರಸ್ಸು, ಬರಗಾಲಕ್ಕೆ ಪರಿಹಾರ ಕೊಟ್ಟಿಲ್ಲ, 15 ಲಕ್ಷ ಎಲ್ಲರ ಖಾತೆಗೆ ಬಂತೇ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯಾಗಿದೆಯೇ? ರೈತರ ಆದಾಯ ದುಪ್ಪಟ್ಟು ಆಗಿದೆಯೇ? ಅಚ್ಚೇ ದಿನ್ ಬಂದಿದೆಯೇ? ಎಂಡಿ ಪ್ರಶ್ನಿಸಿದರು.
 
ಮೋದಿಯವರಿಂದ ರಾಜ್ಯಕ್ಕೆ ಮಲತಾಯಿ ಧೋರಣೆ
 
ಪ್ರಧಾನಿ ಮೋದಿಯವರು ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟಿದ್ದಾರೆ. ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿದ್ದಾರೆ ಎಂದು ಜಾಹಿರಾತು ಬಿಡುಗಡೆ ಮಾಡಲಾಗಿದೆ ಎಂದರು.
 
ದೇಶಕ್ಕೆ ಬಿಜೆಪಿ ಪಕ್ಷವೇ ಡೇಂಜರ್
 
ಕಾಂಗ್ರೆಸ್ ಜಾಹಿರಾತಿಗೆ ಪ್ರತಿಯಾಗಿ ಬಿಜೆಪಿಯವರು ಕಾಂಗ್ರೆಸ್ ಡೇಂಜರ್ ಎಂಬ ಜಾಹಿರಾತು ಬಿಡುಗಡೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹೆಣ್ಣುಮಕ್ಕಳಿಗೆ ಉಚಿತ ಬಸ್ ಸೌಲಭ್ಯ , ಉಚಿತ ವಿದ್ಯುತ್, ಅನ್ನಭಾಗ್ಯ ಯೋಜನೆಗಳು ಡೇಂಜರ್ ಆಗುತ್ತವೆಯೇ? ಸಮಾಜವನ್ನು ಒಡೆಯುವಂತಹ ಕಾರ್ಯಗಳು, ಮತಗಳ ಧ್ರುವೀಕರಣ ಮಾಡುವುದು ಅಪಾಯಕಾರಿಯೇ ಹೊರತು, ವಿವಿಧತೆಯಲ್ಲಿ ಏಕತೆಯನ್ನು ತರುವುದು ಡೇಂಜರ್ ಅಲ್ಲ. ದೇಶಕ್ಕೆ ಬಿಜೆಪಿ ಪಕ್ಷವೇ ಡೇಂಜರ್ ಹೊರತು, ಕಾಂಗ್ರೆಸ್ ಪಕ್ಷ ಅಲ್ಲ ಎಂದು ತಿಳಿಸಿದರು.
 
ಬಿಜೆಪಿಯವರ ಮೇಲೆ ರೇಡ್ ಆಗುವುದಿಲ್ಲವೇಕೆ?
 
ರಾಜ್ಯದಲ್ಲಿ ಕಾಂಗ್ರೆಸ್ ಇದ್ದರೆ, ಭ್ರಷ್ಟಾಚಾರ ಹೆಚ್ಚಾಗಲಿದೆ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕಾನೂನು ಪ್ರಕಾರ ರೇಡ್ ಮಾಡುವುದನ್ನು ನಾವು ಎಂದೂ ವಿರೋಧಿಸುವುದಿಲ್ಲ. ಆದರೆ ಬಿಜೆಪಿಯಲ್ಲಿ ಶ್ರೀಮಂತರಿಲ್ಲವೇ, ಯಡಿಯೂರಪ್ಪ , ವಿಜಯೇಂದ್ರ ಭ್ರಷ್ಟಾಚಾರ ಮಾಡಿಲ್ಲವೇ ? ಶೋಭಾ ಕರಂದ್ಲಾಜೆ, ಅಶೋಕ್, ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಿಜೆಪಿಯವರ ಮೇಲೆ, ಅವರ ಮೇಲೆ ರೇಡ್ ಗಳು ಏಕೆ ಆಗುತ್ತಿಲ್ಲ. ಆದಾಯ ತೆರಿಗೆಯನ್ನು ಸರಿಯಾಗಿ ಕಟ್ಟದವರ ಮೇಲೆ ಕ್ರಮವಾಗಲಿ, ಆದರೆ ಒಬ್ಬರ ಮೇಲೆ ರೇಡ್ ಮಾಡಿ ಮತ್ತೊಬ್ಬರನ್ನು ಬಿಡುವ ಬದಲು, ಆದಾಯಮೀರಿ ಆಸ್ತಿ ಸಂಪಾದಿಸಿದ ಎಲ್ಲರ ಮೇಲೆ ಕಾನೂನು ಕ್ರಮವಾಗಬೇಕು ಎಂದರು.
 
ಕಾಂಗ್ರೆಸ್ ತನ್ನ ಶಕ್ತಿಯನ್ನು ನಂಬಿದೆ
 
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಯಡಿಯೂರಪ್ಪನವರ ಹೇಳಿರುವ ಬಗ್ಗೆ ಉತ್ತರಿಸಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಯಡಿಯೂರಪ್ಪನವರು ಈ ರೀತಿ ಹೇಳಿದ್ದರು. ಆದರೆ ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಗೆದ್ದಿತು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಶಿವಮೊಗ್ಗವನ್ನೂ ಸೇರಿದಂತೆ 20 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ಪಕ್ಷ ನಕಾರಾತ್ಮಕ ವಿಷಯಗಳನ್ನು ಅವಲಂಬಿಸದೇ, ಸದಾ ತನ್ನ ಶಕ್ತಿಯನ್ನು ಅವಲಂಬಿಸಿಯೇ ಚುನಾವಣೆಯನ್ನು ಗೆಲ್ಲುತ್ತೇವೆ ಎಂದರು.
 
ಕುಮಾರಸ್ವಾಮಿಯವರದು ರಾಜಕೀಯ ಹೇಳಿಕೆ
 
ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರು ಯಾವ ಆಧಾರದ ಮೇಲೆ ಇಂತಹ ಹೇಳಿಕೆಯನ್ನು ನೀಡಿದ್ದಾರೆ ಎಂಬುದನ್ನು ಮಾಧ್ಯಮದವರು ಪ್ರಶ್ನಿಸಬೇಕು. ಈ ಬಾರಿ ಗ್ಯಾರಂಟಿಗಳಿಗೆ 36 ಸಾವಿರ ಕೋಟಿ ಹಾಗೂ ಮುಂದಿನ ವರ್ಷ 52009 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದ್ದು, 1.20 ಲಕ್ಷ ಕೋಟಿ ರೂ.ಗಳನ್ನು ಅಭಿವೃದ್ಧಿಗೆ ಮೀಸಲಿರಿಸಿದೆ. ಕುಮಾರಸ್ವಾಮಿಯವರು ಕೇವಲ ರಾಜಕೀಯಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದರು.
 
ಕಾಂಗ್ರೆಸ್ ಅವಧಿಯಲ್ಲಿ ಕಡಿಮೆ ಅಪರಾಧ ಪ್ರಕರಣಗಳು:
 
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದ ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಉತ್ತರಿಸುತ್ತಾ, 2022 ರಲ್ಲಿ ಹೋಲಿಸಿದರೆ ಕಾಂಗ್ರೆಸ್ ಸರ್ಕಾರವಿದ್ದಾಗಲೇ ಅಪರಾಧಗಳು ಕಡಿಮೆಯಾಗಿದೆ. 2023 ರಲ್ಲಿ 1295 ಅಪರಾಧ ಪ್ರಕರಣಗಳು ನಡೆದಿದ್ದರೆ,  ಅವರ ಕಾಲದಲ್ಲಿ 2022 ರಲ್ಲಿ 1370 ಪ್ರಕರಣಗಳು ನಡೆದಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ