ಮೈಸೂರು: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ಜೋರಾಗಿದೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ ಹಾಗೂ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಹಲ್ಲೆ, ಕೊಲೆ ಪ್ರಕರಣ ಖಂಡಿಸಿ ಬಿಜೆಪಿ ಇಂದು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದೆ.
ಮೈಸೂರಿನಲ್ಲಿ ಇಂದ ಬಿಜೆಪಿ ರಾಜ್ಯಾಧ‍್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಈ ವೇಳೆ ಅವರಿಗೆ ಸ್ಥಳೀಯ ಬಿಜೆಪಿ ನಾಯಕರು ಸಾಥ್ ನಿಡಿದ್ದಾರೆ. ಇಂದು ನೇಹಾ ಹತ್ಯೆ ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಿವೈ ವಿಜಯೇಂದ್ರ ಒಂದು ಹೆಣ್ಣುಮಗಳು ತೀರಿಕೊಂಡಾಗ ಆಕೆಯ ಮನೆಗೆ ಹೋಗಿ ಸಾಂತ್ವನ ಹೇಳುವ ಪ್ರಯತ್ನ ಮಾಡಿಲ್ಲ. ಬದಲಾಗಿ ತೇಜೋವಧೆ ಮಾಡುವಂತಹ ಹೇಳಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಗೃಹಸಚಿವರ ಹೇಳಿಕೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಈ ಸರ್ಕಾರಕ್ಕೆ ರಾಜ್ಯದ ಮಹಿಳೆಯರು ಧಿಕ್ಕಾರ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ನಾಲಾಯಕ್ ಸರ್ಕಾರಕ್ಕೆ ರಾಜ್ಯದ ಜನ ಶಾಪ ಹಾಕುತ್ತಿದ್ದಾರೆ. ಕೊಲೆಗಡುಕರಿಗೆ ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ. ಇದು ಅಕ್ಷಮ್ಯ ಅಪರಾಧ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ತೇಜೋವಧೆ ಮಾಡುವ ನೀಚ ಕೆಲಸಕ್ಕಿಳಿದಿರುವ ಸರ್ಕಾರದಿಂದ ಸರಿಯಾದ ತನಿಖೆಯಾಗುತ್ತದೆಂದು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಇದೇ ರೀತಿ ಹೇಳಿಕೆ ನೀಡ್ತಾ ಇದ್ದರೆ ಹೆಣ್ಣು ಮಕ್ಕಳೇ ಬಡಿಗೆ ತೆಗೆದುಕೊಂಡು ಬಾರಿಸ್ತಾರೆ ಇವರಿಗೆ ಎಂದು ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವುದು ಕೇವಲ ಅಲ್ಪಸಂಖ್ಯಾತರ ಮತಗಳಿಂದ ಮಾತ್ರವಲ್ಲ. ಹಾಗಿರುವಾಗ ಒಂದು ಸಮುದಾಯವನ್ನು ಮಾತ್ರ ಓಲೈಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ. ಬಿಜೆಪಿ ಮುಸ್ಲಿಮರ ವಿರೋಧಿಯಲ್ಲ. ಆದರೆ ಕೊಲೆಗಡುಕರನ್ನು, ಭಯೋತ್ಪಾದಕರನ್ನು ರಕ್ಷಿಸುವ ಕೆಲಸ ಮಾಡುವ ಕಾಂಗ್ರೆಸ್ ವಿರುದ್ಧ ಹೋರಾಡುತ್ತಿದ್ದೇವೆ ಎಂದರು.