ಹಣಕಾಸು ವ್ಯವಸ್ಥೆಯನ್ನು ಸಂಪೂರ್ಣ ಹದಗೆಡಿಸಿದ ಸಿದ್ದರಾಮಯ್ಯರ ಸರಕಾರ: ಬಸವರಾಜ ಬೊಮ್ಮಾಯಿ

Krishnaveni K

ಸೋಮವಾರ, 22 ಏಪ್ರಿಲ್ 2024 (11:02 IST)
ಬೆಂಗಳೂರು: ಸಿದ್ದರಾಮಯ್ಯನವರ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರವು ಹಣಕಾಸು ವ್ಯವಸ್ಥೆಯನ್ನು ಸಂಪೂರ್ಣವಾಗಿ ಹದಗೆಡಿಸಿದೆ; ಇದೊಂದು ಗಂಭೀರ ವಿಚಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಕ್ಷೇಪಿಸಿದರು. 
 
ನಗರದ ಹೋಟೆಲ್ ಜಿ.ಎಂ. ರಿಜಾಯ್ಸ್‍ನ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅನುತ್ಪಾದಕ ವೆಚ್ಚದ ಮೇಲೆ ಈ ಸರಕಾರಕ್ಕೆ ನಿಯಂತ್ರಣವೇ ಇಲ್ಲ ಎಂದರು. ನೀವು ಗ್ಯಾರಂಟಿ ಘೋಷಣೆ ಮಾಡಿದ್ದೀರಿ. ಅದಕ್ಕಾಗಿ ಹಣಕಾಸಿನ ತಯಾರಿ ಮಾಡಿಲ್ಲ ಎಂದು ಟೀಕಿಸಿದರು.

ಕೇಂದ್ರ ಸರಕಾರದಿಂದ ಸರಿಯಾಗಿ ಹಣ ಬರುತ್ತಿಲ್ಲ ಎನ್ನುವ ನೀವು ಜನರ ತೆರಿಗೆ ದುಡ್ಡನ್ನು ಸರಿಯಾಗಿ ಬಳಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರದಿಂದ ಬಂದ ಹಣದ ವಿಚಾರದಲ್ಲೂ ಸುಳ್ಳು ಹೇಳಿದ್ದಾರೆ. ಯುಪಿಎ- ಎನ್‍ಡಿಎ ಅವಧಿಯ ಅನುದಾನ ಹೋಲಿಸಿದರೆ ಸತ್ಯ ಹೊರಕ್ಕೆ ಬರುತ್ತದೆ ಎಂದು ತಿಳಿಸಿದರು. ಯುಪಿಎ 10 ವರ್ಷಗಳ ಡಾ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ, ಕಾಂಗ್ರೆಸ್ಸಿನ ಸೋನಿಯಾ ಗಾಂಧಿ- ರಾಹುಲ್ ಗಾಂಧಿಯವರಿದ್ದ ಸರಕಾರದಲ್ಲಿ ತೆರಿಗೆ ಹಂಚಿಕೆಯಲ್ಲಿ 81,795 ಕೋಟಿ ರಾಜ್ಯಕ್ಕೆ ಲಭಿಸಿದ್ದರೆ, ನಮ್ಮ ಎನ್ಡಿಎ ಸರಕಾರದಲ್ಲಿ 2,82,791 ಕೋಟಿ ನೀಡಿದ್ದೇವೆ. ಬಹುತೇಕ 2 ಲಕ್ಷ ಕೋಟಿ ಹೆಚ್ಚು ಹಣ ನೀಡಿದ್ದೇವೆ ಎಂದು ವಿವರಿಸಿದರು.

2014-24ರಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ ಎನ್ನುತ್ತೀರಲ್ಲವೇ? ನಾನು ನಿಮಗೆ ಪ್ರಶ್ನೆ ಕೇಳುತ್ತೇನೆ. ನಿಮ್ಮ ತೆರಿಗೆ ಪಾಲು 81,795 ಕೋಟಿ ಇತ್ತು. ನಮ್ಮ ಕೊಡುಗೆ 2,82,791 ಕೋಟಿ ಇದೆ. ನಮ್ಮದು ರೂಪಾಯಿಗೆ 13 ಪೈಸೆ ಎಂದಾದರೆ ನಿಮ್ಮದು 3 ಪಾಲು ಕಡಿಮೆ ಇದ್ದರೆ 4 ಪೈಸೆ ಆಗುತ್ತದೆಯಲ್ಲವೇ ಎಂದು ಬಸವರಾಜ ಬೊಮ್ಮಾಯಿಯವರು ಪ್ರಶ್ನೆಯನ್ನು ಮುಂದಿಟ್ಟರು.
4 ಪೈಸೆ ಹಿಂದೆ ಸಿಗುತ್ತಿತ್ತು. ಈಗ 13 ಪೈಸೆ ಸಿಗುತ್ತಿದೆ. ಆದರೂ ಬೊಬ್ಬೆ ಹೊಡೀತೀರಲ್ವ? ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಯುಪಿಎ 10 ವರ್ಷಗಳ ಅವಧಿಯಲ್ಲಿ ಅನುದಾನವು 60,779 ಕೋಟಿ ಇತ್ತು. ನಮ್ಮ ಅವಧಿಯಲ್ಲಿ 2,08,832 ಕೋಟಿ ಎಂದು ವಿವರ ನೀಡಿದರು. ಸುಮಾರು 3 ಪಟ್ಟು ಹೆಚ್ಚು ಗ್ರಾಂಟ್ ಇನ್ ಏಯ್ಡ್ ಬಂದಿದೆ ಎಂದರು. ಹೆಚ್ಚುವರಿ ಅನುದಾನ ಬಂದದ್ದನ್ನು ಸಿದ್ದರಾಮಯ್ಯರು ಹೇಳುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರವು ರಾಜ್ಯಗಳಿಗೆ ಬಡ್ಡಿರಹಿತ ಸಾಲ ನೀಡಿದೆ. ಆ ಪೈಕಿ ಕರ್ನಾಟಕಕ್ಕೆ 6012 ಕೋಟಿ ಲಭಿಸಿದೆ. ಇದನ್ನು 50 ವರ್ಷಗಳ ಬಳಿಕ ಮರುಪಾವತಿ ಮಾಡಿದರೆ ಸಾಕು. ಇದನ್ನು ಬಂಡವಾಳವಾಗಿ ಹೂಡಿ ಆಸ್ತಿ ಮಾಡಿಕೊಳ್ಳಲು ಕೊಡಲಾಗಿದೆ ಎಂದು ತಿಳಿಸಿದರು. ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಪ್ರಮುಖರು ಈ ಸಂದರ್ಭದಲ್ಲಿ ಇದ್ದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ