ರೈತರಿಗೆ ವಕ್ಫ್ ನೋಟಿಸ್ ವಿವಾದ: ತಕ್ಷಣವೇ ಜಾರಿಗೆ ಬರಲು ಖಡಕ್ ಆದೇಶ ಕೊಟ್ಟ ಸಿಎಂ ಸಿದ್ದರಾಮಯ್ಯ

Krishnaveni K

ಶನಿವಾರ, 2 ನವೆಂಬರ್ 2024 (14:51 IST)
ಬೆಂಗಳೂರು: ರೈತರ ಆಸ್ತಿಗಳ ಮೇಲೆ ವಕ್ಫ್ ನೋಟಿಸ್ ನೀಡಿರುವ ವಿಚಾರ ಭಾರೀ ವಿವಾದಕ್ಕೆ ಈಡಾಗಿರುವ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್ ಆದೇಶ ಕೊಟ್ಟಿದ್ದಾರೆ.

ವಕ್ಫ್ ನೋಟಿಸ್ ನಿಂದಾಗಿ ರಾಜ್ಯದಲ್ಲಿ ರೈತರು ಕಂಗೆಟ್ಟಿದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ. ಇತ್ತ ಬಿಜೆಪಿ ಕೂಡಾ ರೈತರ ಜಮೀನಿಗೆ ನೀಡಿರುವ ನೋಟಿಸ್ ವಿಚಾರವಾಗಿ ಪ್ರತಿಭಟನೆಗೆ ಮುಂದಾಗಿದೆ. ಈ ವಿಚಾರ ರಾಜ್ಯ ಸರ್ಕಾರಕ್ಕೆ ದೊಡ್ಡ ಕಂಟಕವಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಇಂದು ಕಂದಾಯ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ಮತ್ತು ವಕ್ಫ್ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿದ್ದರಾಮಯ್ಯ, ವಕ್ಫ್ ನೋಟಿಸ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಕ್ಷಣವೇ ರೈತರ ಜಮೀನಿಗೆ ನೀಡಲಾಗಿದ್ದ ನೋಟಿಸ್ ಹಿಂಪಡೆಯುವಂತೆ ಖಡಕ್ ಸೂಚನೆ ನೀಡಿದ್ದಾರೆ.

ರೈತರ ಪಹಣಿ ಬದಲಾವಣೆ ಸಂಬಂಧ ಈಗಾಗಲೇ ನೀಡಿರುವ ನೋಟಿಸ್ ಗಳನ್ನು ವಾಪಸ್ ಪಡೆಯಬೇಕು. ರೈತರ ಸ್ವಾಧೀನದಲ್ಲಿರುವ ಜಮೀನುಗಳಿಗೆ ಯಾವುದೇ ತೊಂದರೆ ನೀಡಬಾರದು. ಕಾನೂನು ಬಾಹಿರವಾಗಿ ಹಾಗೂ ನೋಟಿಸ್ ನೀಡದೇ ಪಹಣಿಯಲ್ಲಿ ಮಾಡಿರುವ ತಿದ್ದುಪಡಿಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಸಿದ್ದರಾಮಯ್ಯ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ