ಶಿವಾಜಿನಗರದ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಈ ಭಾಗದ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡಲಿದೆ. 2016-17 ರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೈಸೂರು, ಗುಲಬರ್ಗಾ, ಬೆಳಗಾವಿ ಹಾಗೂ ಬೆಂಗಳೂರಿನ ಶಿವಾಜಿನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಯೋಜನೆಯನ್ನು ಕೈಗೊಳ್ಳಲಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಗಟ್ಟಲೆ ಚಿಕಿತ್ಸಾ ವೆಚ್ಚವನ್ನು ಬಡವರಿಗೆ ಭರಿಸಲು ಸಾಧ್ಯವಿಲ್ಲ. ಅಲ್ಲಿನ ದುಬಾರಿ ವೆಚ್ಚವನ್ನು ಬಡವರು ಪಾವತಿಸದೇ ಹೋದಲ್ಲಿ,ಅವರಿಗೆ ತಮ್ಮವರ ಶವವನ್ನು ನೀಡದೇ ಅಮಾನುಷವಾಗಿ ವರ್ತಿಸುತ್ತಾರೆ ಎಂದರು.
ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು ನಾನೇ ಹಾಕುತ್ತೇನೆ
ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೇವೆಯನ್ನು ಪೂರೈಸುವ ಕೆಲಸ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಹೋಗಲಾಗದೇ ರೋಗಿಗಳ ಸಾವು ನೋವು ಸಂಭವಿಸಬಾರದೆಂಬ ಉದ್ದೇಶದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಇಂತಹ ಆಸ್ಪತ್ರೆಗಳನ್ನು ಪ್ರಾರಂಭಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೆ. ಆದರೆ ನಂತರ ಬಂದ ಬಿಜೆಪಿ ಸರ್ಕಾರ ಬಂದ ತಕ್ಷಣ ಈ ಯೋಜನೆ ಸ್ಥಗಿತಗೊಂಡಿತು. ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಯೋಜನೆಗೆ ಮಂಜೂರಾತಿ ನನ್ನ ಅವಧಿಯಲ್ಲಿ ನೀಡಲಾಗಿದ್ದು, ನಾನೇ ಯೋಜನೆಗೆ ಅಡಿಗಲ್ಲು ಹಾಕುತ್ತೇನೆ. ಪ್ರತಿ ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಇರಬೇಕು ಎಂಬುದು ನಮ್ಮ ಸರ್ಕಾರದ ಆಶಯವಾಗಿತ್ತು ಎಂದರು.
ಬಡವರಿಗೆ ಸಹಾಯ ನಮ್ಮ ಬದ್ಧತೆ
ಆಸ್ಪತ್ರೆಯ ಶುಚಿತ್ವವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯವೆಂದು ಆಸ್ಪತ್ರೆಯ ಸಿಬ್ಬಂದಿಗೆ ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು. ಓಟಿ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಆಸ್ಪತ್ರೆಯಲ್ಲಿ ಒದಗಿಸಲಾಗಿದೆ. ಬಡವರಿಗೆ ಸಹಾಯ ಒದಗಿಸುವುದು ನಮ್ಮ ಸರ್ಕಾರದ ಬದ್ಧತೆ. ಹಿಂದೆ ನಾನು ಸಿಎಂ ಆಗಿದ್ದಾಗ, ಅನ್ನಭಾಗ್ಯ, ಶಾದಿ ಭಾಗ್ಯ, ಶೂ ಭಾಗ್ಯ, ಇಂದಿರಾಕ್ಯಾಂಟೀನ್, ಮನಸ್ವಿನಿ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದೆ.ಯಾವುದೇ ಜಾತಿಧರ್ಮದ ಬಡವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಿ ಮುಖ್ಯವಾಹಿನಿಗಿ ಬರುವಂತಾಗಲು ಐದು ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. 52009 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಡಲಾಗಿದೆ ಎಂದರು.
ಬಿಜೆಪಿಗೆ ಸುಳ್ಳು ಹೇಳುವುದೇ ಕಾಯಕ
ಬಿಜೆಪಿಯವರು ಬಡವರಪರ ಕೆಲಸ ಮಾಡುವುದನ್ನು ಸಹಿಸುವುದಿಲ್ಲ. ಬಡವರು ಶಕ್ತಿವಂತರಾದರೆ, ಅವರ ಮೇಲೆ ಶೋಷಣೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಬಿಜೆಪಿಯವರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಹಿಟ್ಲರ್ ಕಾಲದಲ್ಲಿ ಸುಳ್ಳು ಹೇಳಲೆಂದೇ ಒಬ್ಬ ಮಂತ್ರಿಯಿದ್ದಂತೆ, ಬಿಜೆಪಿಯವರು ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಸಾಮಾಜಿಕ ನ್ಯಾಯವನ್ನು ಕೇಳಬಾರದೆಂಬುದೇ ಬಿಜೆಪಿಯಂತಹ ಪಟ್ಟಭದ್ರಹಿತಾಸಕ್ತಿಗಳ ಆಶಯವಾಗಿದೆ. ಜನರ ಆಶೀರ್ವಾದವಿರುವರೆಗೆ ಸಿದ್ದರಾಮಯ್ಯನನ್ನು ಅಲುಗಾಡಿಸಲು ಸಾಧ್ಯವಿಲ್ಲ. ನಮ್ಮ ಸರ್ಕಾರಕ್ಕೆ ಬಡವರಪರ ಕೆಲಸದಲ್ಲಿ ಯಾವುದೇ ರಾಜಿ ಮಾಡುವುದಿಲ್ಲ ಎಂದರು.