ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ಮಹತ್ವದ ಘಟ್ಟದಲ್ಲಿರುವಾಗ ವಿಶೇಷ ಅಭಿಯೋಜಕ (ಎಸ್ ಪಿಪಿ)ರನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ಸುದ್ದಿಗಳಿಗೆ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ.
ದರ್ಶನ್ ಮತ್ತು ಗ್ಯಾಂಗ್ ಅರೆಸ್ಟ್ ಮಾಡಿರುವ ಪೊಲೀಸರು ನಾಳೆ ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ. ಈಗ ವಿಚಾರಣೆ ಒಂದು ಹಂತಕ್ಕೆ ಬಂದಿದೆ. ಈ ವೇಳೆ ದರ್ಶನ್ ಪರವಾಗಿ ರಾಜ್ಯ ಸರ್ಕಾರದ ಕೆಲವು ಸಚಿವರು ಎಸ್ ಪಿಪಿ ಪ್ರಸನ್ನ ಕುಮಾರ್ ಅವರನ್ನು ಬದಲಾವಣೆ ಮಾಡಲು ಒತ್ತಡ ಹಾಕಿದ್ದಾರೆ. ಅವರ ಒತ್ತಡಕ್ಕೆ ಮಣಿದು ಎಸ್ ಪಿಪಿ ಬದಲಾವಣೆ ಮಾಡಲಾಗುತ್ತದೆ ಎಂದು ಸುದ್ದಿಯಾಗಿತ್ತು.
ಇದಕ್ಕೆ ತಕ್ಕಂತೆ ಗೃಹಸಚಿವ ಜಿ ಪರಮೇಶ್ವರ್ ಕೂಡಾ ಬದಲಾವಣೆ ಮಾಡಿದರೂ ತಪ್ಪಿಲ್ಲ ಎಂದಿದ್ದರು. ಆದರೆ ಇದೀಗ ಈ ಎಲ್ಲಾ ರೂಮರ್ ಗಳಿಗೆ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ. ನಮಗೆ ಯಾರೂ ಒತ್ತಡ ಹಾಕಿಲ್ಲ. ಒತ್ತಡಗಳಿಗೆ ನಾವು ಮಣಿಯುವುದೂ ಇಲ್ಲ. ಎಸ್ ಪಿಪಿ ಬದಲಾವಣೆ ಪ್ರಸ್ತಾವನೆಯೇ ಆಗಿಲ್ಲ ಎಂದಿದ್ದಾರೆ.
ಈಗ ನಿಯೋಜನೆಗೊಂಡಿರುವ ಎಸ್ ಪಿಪಿ ಪ್ರಸನ್ನಕುಮಾರ್ ಅವರೇ ಕಾನೂನು ಪ್ರಕ್ರಿಯೆ ನಡೆಸಲಿದ್ದಾರೆ. ಅವರನ್ನು ಬದಲಾಯಿಸುವ ಬಗ್ಗೆ ಚರ್ಚೆಯೇ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.