ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರನ್ನು ರೇಣುಕಾಸ್ವಾಮಿ ಹತ್ಯೆ ಕೇಸ್ ನಿಂದ ಬಚಾವ್ ಮಾಡಲು ಎಸ್ ಪಿಪಿ ಬದಲಾವಣೆ ಮಾಡಲಾಗುತ್ತಿದೆಯಾ ಎಂಬ ಅನುಮಾನ ಮೂಡಿದೆ.
ದರ್ಶನ್ ಗೆ ಆಪ್ತರಾಗಿದ್ದ ಮೂವರು ಪ್ರಭಾವಿ ಸಚಿವರಿಂದಲೇ ಸಿಎಂ ಸಿದ್ದರಾಮಯ್ಯ ಮೇಲೆ ಎಸ್ ಪಿಪಿ ಬದಲಾವಣೆಗೆ ಒತ್ತಡ ಹಾಕಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರ ಇದೀಗ ವಿಶೇಷ ಅಭಿಯೋಜಕರಾಗಿ ಪ್ರಸನ್ನಕುಮಾರ್ ಅವರನ್ನು ನೇಮಿಸಿತ್ತು. ಪ್ರಸನ್ನ ಕುಮಾರ್ ಸಿಬಿಐ, ಇಡಿ ಪ್ರಕರಣಗಳು ಸೇರಿದಂತೆ ಅನೇಕ ಪ್ರಕರಣಗಳನ್ನು ನಿರ್ವಹಿಸಿದ ಅನುಭವಿ ಅಭಿಯೋಜಕರಾಗಿದ್ದಾರೆ.
ಆದರೆ ಅವರು ಅಭಿಯೋಜಕರಾದರೆ ದರ್ಶನ್ ರನ್ನು ಕೇಸ್ ನಿಂದ ಬಚಾವ್ ಮಾಡುವುದು ಎಂಬ ಕಷ್ಟಕ್ಕೆ ಅವರನ್ನು ಬದಲಾಯಿಸಲು ಹುನ್ನಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಗೃಹಸಚಿವ ಜಿ ಪರಮೇಶ್ವರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸದ್ಯಕ್ಕೆ ಬದಲಾವಣೆ ಬಗ್ಗೆ ನಿರ್ಧರಿಸಿಲ್ಲ. ಒಂದು ವೇಳೆ ಬದಲಾಯಿಸಿದರೂ ತಪ್ಪೇನಿಲ್ಲ ಎಂದಿದ್ದಾರೆ. ಆ ಮೂಲಕ ಇಂತಹದ್ದೊಂದು ಪ್ರಸ್ತಾವನೆ ಇರುವುದು ನಿಜ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಒಂದು ವೇಳೆ ಈ ಹಂತದಲ್ಲಿ ವಿಶೇಷ ಅಭಿಯೋಜಕರನ್ನು ಬದಲಾಯಿಸಿದರೆ ಸರ್ಕಾರ ದರ್ಶನ್ ಪರವಾಗಿ ಒತ್ತಡಕ್ಕೆ ಮಣಿದಿದೆ ಎಂಬ ಸಂದೇಶ ಹೋಗಲಿದೆ. ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ, ಈ ಪ್ರಕರಣದ ಬಗ್ಗೆ ಯಾರೂ ನನ್ನ ಬಳಿ ಬರಬೇಡಿ ಎಂದು ಖಡಕ್ ಆಗಿ ಹೇಳಿದ್ದರು. ಈಗ ವಿಶೇಷ ಅಭಿಯೋಜಕರ ವಿಚಾರದಲ್ಲೂ ಸಿಎಂ ಅದೇ ಕಟ್ಟುನಿಟ್ಟು ಅನುಸರಿಸುತ್ತಾರಾ ಕಾದುನೋಡಬೇಕಿದೆ.