ಬೆಂಗಳೂರು: ಇತ್ತೀಚೆಗಷ್ಟೇ ರಾಜ್ಯದಲ್ಲಿ ಬಸ್ ಟಿಕೆಟ್ ದರ ಹೆಚ್ಚಳವಾಗಲಿದೆ ಎಂಬ ಸುದ್ದಿಯಿತ್ತು. ಆದರೆ ಈಗ ಸ್ವತಃ ಸಿಎಂ ಸಿದ್ದರಾಮಯ್ಯ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿ ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಲ್ಲ. ಈ ಬಗ್ಗೆ ಸಾರಿಗೆ ಇಲಾಖೆಯೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಅಲ್ಲದೆ, ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದಕ್ಕೂ ಅವರು ಸ್ಪಷ್ಟನೆ ನೀಡಿದ್ದಾರೆ.
ಸಚಿವ ಎಂಬಿ ಪಾಟೀಲ್, ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಬೇಕಲ್ವ. ಅದಕ್ಕೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡುತ್ತಿದ್ದೇವೆ ಎಂದಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಈಗ ಇದನ್ನು ಅಲ್ಲಗಳೆದಿದ್ದು, ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿಲ್ಲ ಎಂದಿದ್ದಾರೆ.
ಮದ್ಯ, ತೈಲ ಮೂಲಗಳಿಂದ ಹೆಚ್ಚಿನ ಆದಾಯ ಬಂದರೆ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗುತ್ತದೆ ಎಂಬ ಉದ್ದೇಶದಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದೇವಷ್ಟೇ. ಕೆಲವು ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ತೈಲ ಬೆಲೆ ಕಡಿಮೆಯಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಜಿಎಸ್ ಟಿ ತಂದ ಮೇಲೆ ರಾಜ್ಯಗಳಿಗೆ ಬರುವ ತೆರಿಗೆ ಹಣ ಕಡಿಮೆಯಾಯಿತು. ಹಾಗಂತ ನಾವು ನೌಕರರಿಗೆ ಸಂಬಳ ನೀಡದೇ ಇದ್ದೀವಾ? ಬಿಜೆಪಿಯರು ಕೇಂದ್ರದಿಂದ ನಮಗೆ ಬರಬೇಕಾದ ಯೋಜನೆಗಳನ್ನು ತರಲು ಮಾತನಾಡಲ್ಲ. ಈಗ ನಾವು ಪಾಪರ್ ಆಗಿದ್ದೇವೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.