ಮೈಸೂರು ದಸರಾದಲ್ಲಿ ರಾಜಕೀಯ ಬೇಡ ಎನ್ನುತ್ತಲೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ

Krishnaveni K

ಸೋಮವಾರ, 22 ಸೆಪ್ಟಂಬರ್ 2025 (13:50 IST)
ಮೈಸೂರು: ಗೋಡಾ ಹೈ - ಮೈದಾನ್ ಹೈ: ಬನ್ನಿ ಚುನಾವಣೆಯಲ್ಲಿ ರಾಜಕಾರಣ ಮಾಡೋಣ. ನಾಡಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ ಎನ್ನುತ್ತಲೇ ಇಂದು ಸಿಎಂ ಸಿದ್ದರಾಮಯ್ಯ ಮೈಸೂರು ದಸರಾ ಉದ್ಘಾಟನಾ ವೇದಿಕೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು ದಸರಾವನ್ನು ಈ ಬಾರಿ ಸಾಹಿತಿ ಬಾನು ಮುಷ್ತಾಕ್ ಉದ್ಘಾಟನೆ ಮಾಡುತ್ತಿರುವುದಕ್ಕೆ ಬಿಜೆಪಿ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಇದಕ್ಕೆ ಇಂದು ದಸರಾ ಉದ್ಘಾಟನಾ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

‘ದಸರಾ ಉತ್ಸವ ಮತ್ತು ನಮ್ಮ ಸಾಂಸ್ಕೃತಿಕ ಹಿರಿಮೆಯ ಪರಿಚಯ ಇಲ್ಲದವರು ಬಾನು ಮುಷ್ತಾಕ್ ಅವರಿಗೆ ವಿರೋಧಿಸಿದ್ದರು. ಇತಿಹಾಸ ತಿರುಚಿ, ಸ್ವಾರ್ಥ ರಾಜಕೀಯ ಮಾಡುವುದು ಅಕ್ಷಮ್ಯ ಅಪರಾಧ. ರಾಜಕಾರಣ ಮಾಡುವುದಿದ್ದರೆ ಚುನಾವಣೆಯಲ್ಲಿ ಮಾಡೋಣ. ನಾಡ ಹಬ್ಬದ ವಿಚಾರದಲ್ಲಿ ಕೆಳ ಮಟ್ಟದ ರಾಜಕಾರಣ ಮಾಡುವುದು ಕ್ಷುಲ್ಲಕ.

ನಾಡಿನ ಬಹುಸಂಖ್ಯಾತ ಸಮುದಾಯ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟಿಸಿರುವುದನ್ನು ಸ್ವಾಗತಿಸಿದೆ. ಇದು ಹೆಮ್ಮೆಯ ಸಂಗತಿ. ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸಿರುವುದು ಸೂಕ್ತವಾಗಿದೆ. ಬಾನು ಮುಷ್ತಾಕ್ ಮುಸ್ಲಿಂ ಮಹಿಳೆ ಎನ್ನುವುದಕ್ಕಿಂತ ಮಾನವೀಯ ಮೌಲ್ಯ ಪಾಲಿಸುವ ಮನುಷ್ಯರು. ನಾವು ಮನುಷ್ಯರು ಪರಸ್ಪರ ಪ್ರೀತಿಯಿಂದ ಬಾಳಬೇಕು. ದ್ವೇಷ ಮನುಷ್ಯತ್ವದ ವಿರೋಧಿ. ಆದ್ದರಿಂದ ದ್ವೇಷವನ್ನು ಆಚರಿಸುವವರು ಮನುಷ್ಯತ್ವದ ವಿರೋಧಿಗಳು.

ಸಂವಿಧಾನದ ಮೌಲ್ಯಗಳಾದ ಸಹಿಷ್ಣುತೆ ಪಾಲಿಸುವವರು ಮಾತ್ರ ಅಪ್ಪಟ ಭಾರತೀಯರು. ನಮ್ಮ ಸಂವಿಧಾನವು ಜಾತ್ಯತೀತ ಮತ್ತು ಧರ್ಮಾತೀತವಾದುದ್ದು. ಇದನ್ನೇ ಹೈಕೋರ್ಟ್- ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.

ಯಾರಿಗೆ ಭಾರತೀಯರು ಎನ್ನುವ ಹೆಮ್ಮೆ ಇರುತ್ತದೋ ಅವರಿಗೆ ಮಾತ್ರ ಸಂವಿಧಾನದ ಬಗ್ಗೆ ಹೆಮ್ಮೆ ಇರುತ್ತದೆ. ನಮಗೆ ನಮ್ಮ ಹಕ್ಕು ಮತ್ತು ಜವಾಬ್ದಾರಿಗಳು ಗೊತ್ತಾಗಬೇಕಾದರೆ ಸಂವಿಧಾನ ಗೊತ್ತಿರಬೇಕು.

ರಾಷ್ಟ್ರಕವಿ ಕುವೆಂಪು ಅವರ ಮಾತನ್ನು ನಾವು ಮರೆಯಬಾರದು. ಗುಡಿ-ಚರ್ಚು-ಮಸೀದಿಗಳ ಬಿಟ್ಟು ಹೊರ ಬರಬೇಕು, ಕುವೆಂಪು ಅವರ ಆಶಯದ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ರಾಜ್ಯವನ್ನು ಗಟ್ಟಿಗೊಳಿಸಬೇಕು.

ಸಂವಿಧಾನದ ಆಶಯದಂತೆ ಎಲ್ಲಾ ಜಾತಿ, ಎಲ್ಲಾ ಧರ್ಮದ ಮತ್ತು ಎಲ್ಲಾ ಪಕ್ಷದ ಬಡವರಿಗೆ ನಾವು ಗ್ಯಾರಂಟಿ ಗಳನ್ನು ಜಾರಿ ಮಾಡಿದ್ದೇವೆ. ಬಿಜೆಪಿಯವರು ಗ್ಯಾರಂಟಿಗಳ ಫಲಾನುಭವಿಗಳಲ್ಲವೇ? ಈ ಗ್ಯಾರಂಟಿಗಳು ನಿಲ್ಲುವುದಿಲ್ಲ. ನಮ್ಮ ಗ್ಯಾರಂಟಿಗಳಿಂದಾಗಿ ನಮ್ಮ ರಾಜ್ಯದ ಜನರ ತಲಾದಾಯ ದೇಶದಲ್ಲೇ ನಂಬರ್ ಒನ್ ಆಗಿದೆ. ಈಗ ಜಿಎಸ್‌ಡಿಪಿ ಯಲ್ಲಿ ದೇಶದಲ್ಲೇ ನಂಬರ್ ಒನ್ ಆಗಿದ್ದೇವೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ