DC-CEO ಗಳ ಸಭೆಯಲ್ಲಿ ಸಚಿವ ಸಂತೋಷ್ ಲಾಡ್, ಈಶ್ವರ್ ಖಂಡ್ರೆ, ಶರಣಪ್ರಕಾಶ್ ಪಾಟೀಲ್ ಮುಂತಾದವರು ಪರ್ಮಿಟ್ ಪಡೆಯದೆ ರಾಯಲ್ಟಿ ಸಂಗ್ರಹದಲ್ಲಿ ಸರ್ಕಾರಕ್ಕೆ ಆಗುತ್ತಿರುವ ನಷ್ಟದ ಬಗ್ಗೆ ಗಮನ ಸೆಳೆದರು.
ಸಚಿವ ಸಂತೋಷ್ ಲಾಡ್ ಅವರು ಮಾತನಾಡುತ್ತಾ ಕ್ವಾರಿ ಗಣಿಗಾರಿಕೆಯಲ್ಲಿ 50 ಲಕ್ಷ ಟನ್ ಗೆ ಪರಿಸರ ತೀರುವಳಿ ಪಡೆದರೆ, 20 ಲಕ್ಷ ಟನ್ ಗೆ ಮಾತ್ರ ಪರ್ಮಿಟ್ ಪಡೆಯುತ್ತಾರೆ. ಹಾಗಿದ್ದರೆ ಹೆಚ್ಚಿನ ಮಟ್ಟದ ಪರಿಸರ ತೀರುವಳಿ ಪಡೆದದ್ದು ಏತಕ್ಕೆ? ರಾಜ್ಯದಲ್ಲಿ ಪರಿಸರ ತೀರುವಳಿ ಪಡೆದಿರುವುದಕ್ಕೂ, ಪರ್ಮಿಟ್ ಪಡೆದಿರುವುದಕ್ಕೂ ಅರ್ಧಕರ್ಧ ಕಡಿಮೆ ಇದೆ ಎಂದು ಮುಖ್ಯಮಂತ್ರಿಗಳ ಗಮನ ಸೆಳೆದರು.
ಸಂತೋಷ್ ಲಾಡ್ ಅವರ ಮಾತಿಗೆ ಹಲವು ಸಚಿವರು ಧ್ವನಿಗೂಡಿಸಿದರು.
ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಿದ ಸಿಎಂ ಇದನ್ನೆಲ್ಲಾ ತಕ್ಷಣ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ಬಗ್ಗೆ ಅಗತ್ಯವಿದ್ದರೆ ಸರ್ಕಾರದಿಂದ ಹೊಸ ನೀತಿಯನ್ನೇ ರೂಪಿಸೋಣ ಎಂದರು.
ಅಕ್ರಮ ಗಣಿಗಾರಿಕೆಗೆ ತಡೆಗೆ ಕಟ್ಟುನಿಟ್ಟಿನ ಕ್ರಮ
ಅಕ್ರಮ ಗಣಿಗಾರಿಕೆ, ಸಾಗಾಣಿಕೆ ಮತ್ತು ದಾಸ್ತಾನು ಕುರಿತು ಹಲವಾರು ದೂರುಗಳು ಬರುತ್ತಿದ್ದು, ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಕ್ರಮ ಗಣಿಗಾರಿಕೆ ಮಾಡುವ ಮರಳು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಗ್ರಾಮ ಪಂಚಾಯತ್ ಮೂಲಕ ಮರಳು ಪೂರೈಕೆ ಮಾಡಲು ಈಗಾಗಲೇ ಗುರುತಿಸಲಾಗಿರುವ ಮರಳು ಬ್ಲಾಕ್‌ಗಳ ಮೂಲಕ ಮರಳು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಒಟ್ಟು 372 ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದ್ದು, 102 ಮರಳು ಬ್ಲಾಕ್‌ಗಳು ಕಾರ್ಯ ಪ್ರಾರಂಭಿಸಿವೆ. ಇನ್ನೂ 270 ಮರಳು ಬ್ಲಾಕ್‌ಗಳು ಕಾರ್ಯಾರಂಭ ಮಾಡಬೇಕು ಎಂದು ಹೇಳಿದರು.