ನಾಳೆಯಿಂದ ಕಾಲೇಜ್ ಓಪನ್, ಯಾವೆಲ್ಲಾ ತರಗತಿ ನಡೆಯುತ್ತೆ? ಏನೇನು ರೂಲ್ಸ್? ಇಲ್ಲಿದೆ ಫುಲ್ ಡೀಟೆಲ್ಸ್

ಭಾನುವಾರ, 25 ಜುಲೈ 2021 (15:33 IST)
ಅಂತೂ ಕಾಲೇಜುಗಳು ಮತ್ತೆ ವಿದ್ಯಾರ್ಥಿಗಳಿಗೆ ಬಾಗಿಲು ತೆರೆದಿವೆ. ಕೋವಿಡ್ ಮೊದಲನೇ ಮತ್ತು ಎರಡನೇ ಅಲೆಯ ಆರ್ಭಟದಲ್ಲಿ ಮನೆಗಳಲ್ಲೇ ಉಳಿದುಹೋಗಿದ್ದ ವಿದ್ಯಾರ್ಥಿಗಳು ಈಗ ಕಾಲೇಜಿಗೆ ತೆರಳಲು ಸಜ್ಜಾಗಿದ್ದಾರೆ. ರಾಜ್ಯದಲ್ಲಿ ನಾಳೆಯಿಂದ ಪದವಿ ಕಾಲೇಜುಗಳು ಪುನರಾರಂಭಗೊಳ್ಳಲಿವೆ. ಆದರೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಇಬ್ಬರಿಗೂ ಸಾಕಷ್ಟು ನಿಯಮಗಳನ್ನು ರೂಪಿಸಲಾಗಿದೆ. ಯಾವುದೇ ಕಾರಣಕ್ಕೂ ನಿಯಮಗಳನ್ನು ತಪ್ಪಿಸದೆ ಕಾಲೇಜಿಗೆ ತೆರಳಲು ಸೂಚಿಸಲಾಗಿದೆ.

ಲಸಿಕೆ ಪಡೆದ ವಿದ್ಯಾರ್ಥಿಗಳಷ್ಟೇ ಕಾಲೇಜಿಗೆ ಬರಬೇಕು ಎನ್ನುವುದು ಕಡ್ಡಾಯ ನಿಯಮ. ಕಾಲೇಜಿನ ಗೇಟಿನ ಬಳಿಯೇ ವಿದ್ಯಾರ್ಥಿಗಳ ಲಸಿಕಾ ಪ್ರಮಾಣ ಪತ್ರ ಪರಿಶೀಲಿಸಿ ನಂತರವಷ್ಟೇ ಪ್ರವೇಶ ನೀಡಲಾಗುತ್ತದೆ. ಕನಿಷ್ಟ 1 ಲಸಿಕೆಯನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಮಾತ್ರ ಎಂಟ್ರಿ ಸಿಗಲಿದೆ. ಇನ್ನು ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳಿಗೆ RTPCR ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಕಾಲೇಜಿಗಆಗಮಿಸುವ 72 ಗಂಟೆಗಳ ಮುಂಚೆ ಅವರು ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿರಬೇಕಿದೆ. ಇಷ್ಟೆಲ್ಲಾ ನಿಯಮಗಳಿದ್ದರೂ ಯಾವುದೇ ವಿದ್ಯಾರ್ಥಿಗೆ ಹಾಜರಾತಿ ಕಡ್ಡಾಯವಿಲ್ಲ ಎನ್ನುವುದನ್ನೂತಿಳಿಸಲಾಗಿದೆ.
ಹಾಗಂತ ಕಾಲೇಜಿಗೆ ವಿದ್ಯಾರ್ಥಿಗಳು ಬಂದಿಲ್ಲ ಎಂದು ಪ್ರಾಧ್ಯಾಪಕರು ಸುಮ್ಮನೆ ಇರುವಂತಿಲ್ಲ. ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರದಿದ್ದರೂ ಪ್ರಾಧ್ಯಾಪಕರಿಗೆ ಕಡ್ಡಾಯ ಹಾಜರಾತಿ ಇರಲಿದೆ. ಕಾಲೇಜುಗಳನ್ನ ಕಡ್ಡಾಯವಾಗಿ ತೆರಯುವಂತೆ ವಿವಿಗಳಿಂದ ಸೂಚನೆ ನೀಡಲಾಗಿದೆ. ಈಗಾಗಲೇ ಶೇ.75% ವಿದ್ಯಾರ್ಥಿಗಳ ಲಸಿಕೆ ನೀಡಲಾಗಿದೆ, ಶೀಘ್ರದಲ್ಲೇ ಬಾಕಿ ಉಳಿದ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ನೀಡಲಾಗುವುದು ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಇನ್ನು, ಕೋವಿಡ್ ಮಾರ್ಗಸೂಚಿ ಅನುಸರಿಸಿ ಭೌತಿಕ ತರಗತಿ ಶುರು ಮಾಡಲಾಗುತ್ತದೆ. ಸುಮಾರು 3 ತಿಂಗಳ ಬಳಿಕ ಪದವಿ ಕಾಲೇಜುಗಳು ತೆರೆಯುತ್ತಿವೆ. ನಾಳೆಯಿಂದ ಎಲ್ಲ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ಡಿಪ್ಲೊಮಾ ತರಗತಿಗಳು ನಡೆಯಲಿದೆ. ಹಾಗಂತ ಭೌತಿಕ ತರಗತಿ ಆರಂಭವಾಯಿತು ಎಂದು ಆನ್ಲೈನ್ ತರಗತಿ ನಿಲ್ಲಿಸುವುದಿಲ್ಲ. ಕಾಲೇಜುಗಳಲ್ಲೇ ತರಗತಿ ಆರಂಭವಾದರೂ ಆನ್ ಲೈನ್ ಕ್ಲಾಸ್ ಮುಂದುವರೆಯಲಿದೆ. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಮೊದಲ ಡೋಸ್ ಲಸಿಕೆ ಕಡ್ಡಾಯಗೊಳಿಸಲಾಗಿದೆ.
ರಾಜ್ಯದಲ್ಲಿ ಹಂತಹಂತವಾಗಿ ಶಾಲಾ ಕಾಲೇಜುಗಳನ್ನು ತೆರೆಯಲಾಗುತ್ತದೆ ಎಂದು ಈಗಾಗಲೇ ರಾಜ್ಯ ಸರ್ಕಾರ ತಿಳಿಸಿದೆ. ಇದರಲ್ಲಿ ಮೊದಲ ಹಂತವಾಗಿ ನಾಳೆಯಿಂದ ಕಾಲೇಜುಗಳು ತೆರೆಯಲಿವೆ. ಕೆಲ ಸಮಯದವರಗೆ ಕಾಲೇಜುಗಳಲ್ಲಿ ತರಗತಿಗಳು ನಡೆಯುವ ಬಗೆ, ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಮತ್ತು ಕೋವಿಡ್ ಪ್ರಸರಣ ಎಲ್ಲವನ್ನೂ ಗಮನಿಸಿ ನಂತರ ಮುಂದಿನ ಹಂತವಾಗಿ ಪಿಯುಸಿ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳ ತರಗತಿ ಪ್ರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಇದಲ್ಲದೇ ಆಗಸ್ಟ್- ಸೆಪ್ಟೆಂಬರ್ ವೇಳೆಗೆ ಕೋವಿಡ್ ಮೂರನೇ ಅಲೆ ಅಪ್ಪಳಿಸಲಿದೆ ಎನ್ನುವ ಎಚ್ಚರಿಕೆಯನ್ನೂ ವೈದ್ಯರು ನೀಡಿರುವುದರಿಂದ ಹಂತ ಹಂತವಾಗಿ ಶಾಲಾ ಕಾಲೇಜುಗಳನ್ನು ತೆರೆಯಲಾಗುತ್ತಿದೆ. ಹೆಚ್ಚೆಚ್ಚು ಜನರಿಗೆ ಲಸಿಕೆ ನೀಡಿದರೆ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಲಸಿಕಾ ಕಾರ್ಯಕ್ರಮವನ್ನು ಚುರುಕುಗೊಳಿಸಲಾಗಿದೆ. ಎಲ್ಲಾ ಕಾಲೇಜು ವಿದ್ಯಾರ್ಥಿಗಳು ಲಸಿಕೆ ಪಡೆದರೆ ಆಗಲೂ ಕೋವಿಡ್ ಹರಡುವ ಅಪಾಯದಿಂದ ಪಾರಾಗಬಹುದಾಗಿದೆ.
ಕಾಲೇಜಿನಲ್ಲಿ ತರಗತಿಗಳ ಒಳಗೆ ಕೂಡಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಸ್ಯಾನಿಟೈಸರ್ ಬಳಕೆ, ಕಾಲೇಜು ಆವರಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕಾಲೇಜು ಆಡಳಿತ ಮಂಡಳಿಗೂ ಸೂಚಿಸಲಾಗಿದೆ. ಇನ್ನು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಎಲ್ಲಾ ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವಿಕೆ, ದೈಹಿಕ ಅಂತರ ಕಾಪಾಡುವುದು ಮತ್ತು ಸ್ವಚ್ಛತೆ ಕಾಪಾಡುವುದನ್ನು ತಪ್ಪದೇ ಪಾಲಿಸಲು ಸೂಚಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದೂ ಒಂದು ಪರೀಕ್ಷೆಯಂತೆಯೇ ಇದ್ದು ಕೋವಿಡ್ ವಿರುದ್ಧ ವಿದ್ಯಾರ್ಥಿಗಳ ಶಿಕ್ಷಣ, ಆ ಮೂಲಕ ಅವರ ಭವಿಷ್ಯ ಗೆಲ್ಲಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ