ಬೆಂಗಳೂರು: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಸಹೋದರ ಅರಿಶಿನ ಕುಂಕುಮ ರೂಪದಲ್ಲಿ ನೀಡಿದ್ದ ಸೈಟು ವಿಚಾರ ಈಗ ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಮೈಸೂರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.
ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಅರಿಶಿನ ಕುಂಕುಮ ರೂಪದಲ್ಲಿ ಮೈಸೂರಿನ ಕೆಸರೆ ಭಾಗದಲ್ಲಿ ಮೂರೂವರೆ ಎಕರೆ ಜಮೀನು ನೀಡಿದ್ದರು. ಇದೇ ಜಮೀನಿನ ಬದಲಿಗೆ ಮುಡಾದವರು 14 ಸೈಟು ನೀಡಿದ್ದು ಅಕ್ರಮ ಎಂದು ಈಗ ವಿಚಾರಣೆ ನಡೆಯುತ್ತಿದೆ.
ಅದರ ನಡುವೆ ಈ ಸೈಟಿಗೆ ಸಂಬಂಧಪಟ್ಟಂತೆ ಮತ್ತೊಂದು ದೂರು ದಾಖಲಾಗಿದೆ. ಮಲ್ಲಿಕಾರ್ಜುನ ಸ್ವಾಮಿಗೆ ಈ ಸೈಟ್ ನ್ನು ದೇವರಾಜ್ ಎಂಬವರು ಮಾರಿದ್ದರು. ಆದರೆ ಆ ಜಮೀನು ದೇವರಾಜ್ ಅವರದ್ದಲ್ಲ, ನಮ್ಮದು ಎಂದು ದೇವರಾಜ್ ಸಹೋದರ ಮೈಲಾರಯ್ಯನ ಮಗಳು ಜಮುನಾ ಎಂಬವರು ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ನಮ್ಮ ಚಿಕ್ಕಪ್ಪ ದೇವರಾಜ್ ನಮ್ಮ ತಂದೆಯ ಭಾಗವನ್ನೂ ಮೋಸದಿಂದ ಬರೆಯಿಸಿಕೊಂಡು ನಮಗೆ ಮೋಸ ಮಾಡಿದ್ದಾರೆ. ಈ ವಿಚಾರ ನಮಗೆ ಈಗ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಖಾತೆ ಮಾಡಿಸಿಕೊಡುವುದಾಗಿ ಹೇಳಿ ತಂದೆಯವರ ಸಹಿ ಪಡೆದುಕೊಂಡಿದ್ದಾರೆ. ಹೀಗಾಗಿ ನ್ಯಾಯಾಲಯಕ್ಕೆ ದೂರು ನೀಡಿರುವುದಾಗಿ ಜಮುನಾ ಹೇಳಿದ್ದಾರೆ.