ಬಿಜೆಪಿಗೆ ಗೆಲುವಿಗೆ ಕಾಂಗ್ರೆಸ್ ನೇರ ಕಾರಣ: ಹೆಚ್.ಡಿ.ಕುಮಾರಸ್ವಾಮಿ ಆರೋಪ
ಶುಕ್ರವಾರ, 10 ಜೂನ್ 2022 (20:10 IST)
ತೀವ್ರ ಕುತೂಹಲ ಕೆರಳಿಸಿರುವ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿ ಗೆಲುವು ಸಾಧಿಸಿದರೆ ಅದಕ್ಕೆ ಕಾಂಗ್ರೆಸ್ ಪಕ್ಷ ನೇರ ಹೊಣೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ರಾಜ್ಯಸಭಾ ಮತದಾನ ಅಂತ್ಯಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ಇಬ್ಬರು ಶ್ರೀನಿವಾಸರು ಅಡ್ಡಮತದಾನ ಮಾಡುವ ಮೂಲಕ ಕುತ್ತು ತಂದಿದ್ದಾರೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಕೀಳುಮಟ್ಟದ ರಾಜಕೀಯವನ್ನ ಮಾಡುತ್ತಿದ್ದಾರೆ. ಜೆಡಿಎಸ್ ಶಾಸಕರಿಂದ ಅಡ್ಡ ಮತದಾನ ಮಾಡಿಸುವ ಮೂಲಕ ಬಿಜೆಪಿಯ ಮೂರನೇ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕೋಲಾರ ಶಾಸಕ ಶ್ರೀನಿವಾಸ ಗೌಡ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಮೂಲಕ ಅಲ್ಲಿನ ಮತದಾರರಿಗೆ ಅವಮಾನ ಮಾಡಿದ್ದಾರೆ. ಗುಬ್ಬಿ ಶಾಸಕ ಶ್ರೀನಿವಾಸ ಜೆಡಿಎಸ್ ಅಭ್ಯರ್ಥಿಗೆ ಮತ ಚಲಾಯಿಸುವುದಾಗಿ ಹೇಳಿ ಖಾಲಿ ಮತಪತ್ರವನ್ನ ಹಾಕಿ ಹೋಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೋಲಾರದ ಶಾಸಕ ಶ್ರೀನಿವಾಸ ಗೌಡ ನಾನು ಕಾಂಗ್ರೆಸ್ ಪಕ್ಷವನ್ನ ಪ್ರೀತಿಸುವ ಕಾರಣ ಆ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದಿದ್ದಾರೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಕುಮಾರಸ್ವಾಮಿಯವರಿಂದ ನನಗೆ ತೀವ್ರ ನೋವಾಗಿದೆ. ನನಗೆ ಅವರ ಬಗ್ಗೆ ಬೇಸರವಿದೆ. ಜೆಡಿಎಸ್ ಅಭ್ಯರ್ಥಿಗೆ ಮತ ಚಲಾಯಿಸುವಂತೆ ನನ್ನನ್ನು ಯಾರು ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.