ಕಲಬುರ್ಗಿ: ಕಾಂಗ್ರೆಸ್ ಪಕ್ಷದಲ್ಲಿ ಜಿದ್ದಾಜಿದ್ದಿ ಶುರುವಾಗಿದೆ. 4 ಗೋಡೆ ಮಧ್ಯೆ ಇದ್ದುದು ಈಗ ಬಹಿರಂಗಕ್ಕೆ ಬಂದಿದೆ. ಇನ್ನು ಹೊಡೆದಾಟವೂ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಕಲಬುರ್ಗಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ಹಂಚಿಕೆ ಒಪ್ಪಂದ ಕುರಿತಂತೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿಭಿನ್ನ ಹೇಳಿಕೆ ಕೊಡುತ್ತಿರುವ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಈ ಉತ್ತರ ನೀಡಿದರು.
ಬಿಜೆಪಿ-ಜೆಡಿಎಸ್ ಮುಡಾ ಅಕ್ರಮ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಹೋರಾಟ ಮಾಡಿದ್ದವು. ತಾವು ತಪ್ಪು ಮಾಡಿಲ್ಲ ಎಂದಿದ್ದ ಮುಖ್ಯಮಂತ್ರಿಗಳು, 62 ಕೋಟಿ ಪರಿಹಾರ ಕೇಳಿದ್ದರು. ಬಳಿಕ ಪರಿಹಾರ ಇಲ್ಲದೇ ನಿವೇಶನ ಹಿಂತಿರುಗಿಸಿದ್ದಾರೆ. ಫೋರ್ಜರಿ, ತಿದ್ದುವ ಕೆಲಸ ಇ.ಡಿ. ತನಿಖೆ ವೇಳೆ ಬೆಳಕಿಗೆ ಬರುತ್ತಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ವಕ್ಫ್ ಬೋರ್ಡ್ ಮೂಲಕ ರೈತರಿಗೆ ನೋಟಿಸ್ ಕೊಟ್ಟಿದ್ದಾರೆ. ಚಟ್ನಳ್ಳಿ ಎಂಬ ಗ್ರಾಮದಲ್ಲಿ ಇಡೀ ಊರಿಗೇ ನೋಟಿಸ್ ಕೊಟ್ಟಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ಅದಕ್ಕಾಗಿ ಬಿಜೆಪಿ ರೈತರ ಪರವಾಗಿ ಹೋರಾಟ ಶುರು ಮಾಡಿದೆ ಎಂದು ತಿಳಿಸಿದರು.
ಹಾಸನದಲ್ಲಿ ಸಿಎಂ ಶಕ್ತಿ ಪ್ರದರ್ಶನ
ಜನಕಲ್ಯಾಣ ಎಂದರೇನು? ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ ಅವರು, ಲೋಕಸಭಾ ಚುನಾವಣೆ ಬಂದಾಗ ಮತದಾನ ಆಗುವ 3 ದಿನ ಮುಂಚೆ ಖಾತೆಗಳಿಗೆ ಗ್ಯಾರಂಟಿ ಹಣ ಬಿಡುಗಡೆ ಮಾಡುವುದು, ಆಮೇಲೆ ಮರೆತು ವಿಧಾನಸಭಾ ಉಪ ಚುನಾವಣೆ ಬಂದಾಗ ಮತ್ತೆ ಇವರಿಗೆ ಗ್ಯಾರಂಟಿ ನೆನಪಾಗಿದೆ. ಗ್ಯಾರಂಟಿಗಳನ್ನು ಅವಮಾನಿಸುವ ರೀತಿಯಲ್ಲಿ, ಬಡವರನ್ನು ಅಪಮಾನಿಸುವ ಮಾದರಿಯಲ್ಲಿ ಕಾಂಗ್ರೆಸ್ಸಿಗರು ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಸಮಾವೇಶದ ಕುರಿತ ಪ್ರಶ್ನೆಗೆ ಅವರು ಉತ್ತರ ಕೊಟ್ಟರು.
ಯುವನಿಧಿ ಬಗ್ಗೆ ಯಾವ ಮಂತ್ರಿ ಮಾತನಾಡುತ್ತಿದ್ದಾರೆ? ಎಂದ ಅವರು, ಶಿಕಾರಿಪುರ ಕ್ಷೇತ್ರ ಸೇರಿ ಎಲ್ಲೆಡೆ ಶಾಲಾ ವಿದ್ಯಾರ್ಥಿಗಳಿಗೆ ಸಮರ್ಪಕ ಸರಕಾರಿ ಬಸ್ಸುಗಳೇ ಇಲ್ಲ ಎಂದು ಟೀಕಿಸಿದರು. ಹಾಸನದಲ್ಲಿ ಜನಕಲ್ಯಾಣ ಕಾರ್ಯಕ್ರಮ ಇದೆ. ರಾಜ್ಯದ ಅಭಿವೃದ್ಧಿಗಾಗಿ ಯಾವ ಹೊಸ ಯೋಜನೆ ನೀಡಿದ್ದಾರೆ ಎಂದು ಪ್ರಶ್ನಿಸಿದರು. ಅನುದಾನ ಇಲ್ಲದೆ, ಕ್ಷೇತ್ರ ಅಭಿವೃದ್ಧಿ ಮಾಡಲಾಗದೆ ಶಾಸಕರು ತೊಂದರೆಗೆ ಸಿಲುಕಿದ್ದಾರೆ. ಎಲ್ಲವೂ ಕೂಡ ಬೂಟಾಟಿಕೆ ಎಂದು ಆಕ್ಷೇಪಿಸಿದರು. ಹಾಸನದಲ್ಲಿ ನಡೆಯುವ ಜನಕಲ್ಯಾಣ ಕಾರ್ಯಕ್ರಮ ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶನ ಎಂದು ತಿಳಿಸಿದರು.
3 ಚುನಾವಣೆ ಗೆದ್ದಿದ್ದು ಮುಖ್ಯಮಂತ್ರಿ ಸ್ಥಾನ ಬಿಡುವುದಿಲ್ಲ ಎಂಬ ಧಮ್ಕಿಯನ್ನು ಜನಕಲ್ಯಾಣದ ಹೆಸರಿನಲ್ಲಿ ಮಾಡಲು ಹೊರಟಿದ್ದರು. ಸರಕಾರ ಅಧಿಕಾರಕ್ಕೆ ಬರಲು ತಮ್ಮದೂ ಶೇ 50 ಪಾತ್ರ ಇದೆ ಎಂದು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಕಾಯುತ್ತಿದ್ದಾರೆ ಎಂದು ವಿಶ್ಲೇಷಿಸಿದರು. ಕಾಂಗ್ರೆಸ್ಸಿನಲ್ಲಿ ಸಿಎಂ ಗಾದಿಗೆ ಪೈಪೋಟಿ ನಡೆದಿದೆ. ಒಳ ಒಪ್ಪಂದದ ಕುರಿತು ಸಿದ್ದರಾಮಯ್ಯನವರೇ ತಿಳಿಸಬೇಕು ಎಂದು ಆಗ್ರಹಿಸಿದರು.
ಈ ಭಾಗದ 2ರಿಂದ 3 ಲಕ್ಷ ಎಕರೆ ತೊಗರಿ ಬೆಳೆ ಸಂಪೂರ್ಣ ನಾಶವಾಗಿದ್ದು, ಎಕರೆಗೆ 25 ಸಾವಿರದಿಂದ 30 ಸಾವಿರ ಪರಿಹಾರ ನೀಡಬೇಕೆಂಬ ಜನರ ಅಪೇಕ್ಷೆ ಇದೆ. ಅದನ್ನು ಈಡೇರಿಸಿ ಎಂದು ಒತ್ತಾಯಿಸಿದರು. ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕೊಲೆಗಳು ನಡೆದರೂ ಮುಚ್ಚಿ ಹಾಕುವ ಪರಿಸ್ಥಿತಿ ಇದೆ ಎಂದು ಆರೋಪಿಸಿದರು.
ಮುಡಾ ವಿಷಯದಲ್ಲಿ ಇ.ಡಿ.ಗೆ ತನಿಖೆ ಮಾಡುವ ಅಧಿಕಾರವೇ ಇಲ್ಲ ಎಂಬ ಮುಖ್ಯಮಂತ್ರಿಗಳ ಆಕ್ಷೇಪ ಕುರಿತ ಪ್ರಶ್ನೆಗೆ ಉತ್ತರಿಸಿ, ನಿಮಗೆ ಬೇಕಾದ ಅಧಿಕಾರಿಗಳನ್ನು ತನಿಖಾ ಸಂಸ್ಥೆಯಲ್ಲಿ ಇಟ್ಟುಕೊಂಡು, ನಿಮ್ಮ ಬಾಮೈದ ರಾತ್ರಿ 8, 12 ಗಂಟೆಗೂ ಲೋಕಾಯುಕ್ತ ಸಂಸ್ಥೆಗೆ ಭೇಟಿ ಕೊಡಬಹುದು. ನೀವು ಮಾತ್ರ ಅಕ್ರಮ ನಡೆದೇ ಇಲ್ಲ; ನಾನು ಪ್ರಾಮಾಣಿಕ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದೀರಿ. ಇ.ಡಿ. ಮೂಲಕ ಅಕ್ರಮ ಬಹಿರಂಗವಾಗುತ್ತಿದ್ದಂತೆ ಸಿದ್ದರಾಮಯ್ಯರಿಗೆ ಇ.ಡಿ.ಮೇಲೆ ಕೋಪ ಶುರುವಾಗಿದೆ ಎಂದು ತಿಳಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಇತರ ಪ್ರಮುಖರು ಇದ್ದರು.