ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿದ್ಯುತ್ ಕ್ಷಾಮ ತಂದಿರಿಸಿದೆ : ಬೊಮ್ಮಾಯಿ

ಮಂಗಳವಾರ, 5 ಸೆಪ್ಟಂಬರ್ 2023 (08:44 IST)
ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ವಿದ್ಯುತ್ ಕ್ಷಾಮ ತಂದಿಟ್ಟಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ  ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಹಲವು ಕಡೆ ಅಘೋಷಿತ ಲೋಡ್ ಶೆಡ್ಡಿಂಗ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರಿನಲ್ಲಿ ಮಾತ್ರ ಅಲ್ಲ ಇಡೀ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಆಗ್ತಿದೆ. ರೈತರಿಗೆ ಕೇವಲ 3 ಗಂಟೆ ವಿದ್ಯುತ್ ಕೊಡುತ್ತಿದ್ದಾರೆ. ಅದೂ ರಾತ್ರಿ 12 ರಿಂದ 3 ಗಂಟೆಗೆ ಕರೆಂಟ್ ಸಿಗುತ್ತಿದೆ. ಇದಕ್ಕೆ ಸರ್ಕಾರ ಕಾರಣ. ವಿದ್ಯುತ್ ಕ್ಷೇತ್ರಕ್ಕೆ ಸರ್ಕಾರದಿಂದ ಸಂಪೂರ್ಣ ಬೆಂಬಲ ಸಿಗುತ್ತಿಲ್ಲ. ಹೀಗಾಗಿ ವಿದ್ಯುತ್ ಕೊರತೆ ಇದೆ ಎಂದು ತಿಳಿಸಿದರು.

ನಾವು ಇದ್ದಾಗ ಬೇಸಿಗೆ ಇದ್ದಾಗಲೂ ಲೋಡ್ ಶೆಡ್ಡಿಂಗ್ ಮಾಡಿರಲಿಲ್ಲ. ನಾವು ಕಾಲ ಕಾಲಕ್ಕೆ ವಿದ್ಯುತ್ ಕ್ಷೇತ್ರಕ್ಕೆ ಸಾಕಷ್ಟು ಸಹಕಾರ ನೀಡಿದ್ದೆವು. ಆದರೆ ಈ ಸರ್ಕಾರ ನಿರ್ವಹಣೆಯಲ್ಲಿ ಎಡವಿದ್ದಾರೆ. ರಾಜ್ಯದ ಆರ್ಥಿಕ ನಿರ್ವಹಣೆ ಸರಿಯಿಲ್ಲ ಎಂದು ಇದು ತೋರಿಸುತ್ತದೆ.

ವಿದ್ಯುತ್ ಉತ್ಪಾದಕರಿಗೆ ದುಡ್ಡು ಕೊಡುತ್ತಿಲ್ಲ. ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ತರಲು ಹಣ ಕೊಡುತ್ತಿಲ್ಲ. ಥರ್ಮಲ್ ಪ್ಲ್ಯಾಂಟ್ಗಳಲ್ಲಿ 100% ವಿದ್ಯುತ್ ಪೂರ್ಣ ಉತ್ಪತ್ತಿ ಮಾಡುತ್ತಿಲ್ಲ. ಹೊರಗೆ ಕರೆಂಟ್ ಖರೀದಿಗೆ ಮುಂದಾಗಿದ್ದಾರೆ. ಆದರೆ ಹಣ ಇಲ್ಲ ಎಂದು ವಾಗ್ದಾಳಿ ನಡೆಸಿದರು. 

ಈ ಸರ್ಕಾರದಲ್ಲಿ ಹಣಕಾಸಿನ ವ್ಯವಸ್ಥೆ ಸರಿಯಿಲ್ಲದೆ ಹೀಗೆ ಆಗಿದೆ. ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಆವರಿಸಿದೆ. ಮಳೆಯಿಲ್ಲದೆ ರಾಜ್ಯದಲ್ಲಿ ಈಗ ಕೃಷಿ ಬರ ಇದೆ. ನೀರಿನ ಬರ ಇದೆ. ಇದರ ಜೊತೆಗೆ ಈಗ ವಿದ್ಯುತ್ ಬರ ಕೂಡಾ ರಾಜ್ಯಕ್ಕೆ ಬಂದಿದೆ ಎಂದು ಕಿಡಿಕಾರಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ